ADVERTISEMENT

ಮೆಟ್ರೊ ರೈಲು, ಕಾವೇರಿ ನೀರು ಹೊಸಕೋಟೆ ತಾಲೂಕಿಗೆ ವಿಸ್ತರಣೆ

ನೀರು ತುಂಬುವ ಯೋಜನೆ, ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 14:36 IST
Last Updated 4 ನವೆಂಬರ್ 2019, 14:36 IST
   

ಹೊಸಕೋಟೆ: ಮೆಟ್ರೊ, ಕಾವೇರಿ 4ನೇ ಹಂತದ ನೀರು ಪೂರೈಕೆ ಯೋಜನೆಯನ್ನು ತಾಲ್ಲೂಕಿನವರೆಗೆ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನಿಡಿದರು.

ತಾಲ್ಲೂಕಿನ ಜಡಿಗೇನಹಳ್ಳಿ ಮತ್ತು ಅನುಗೊಂಡನಹಳ್ಳಿಯ 30 ಕೆರೆಗಳಿಗೆ ಕೆ.ಆರ್.ಪುರದಿಂದ ನೀರು ತುಂಬುವ ₹ 100 ಕೋಟಿ ವೆಚ್ಚದ ಯೋಜನೆ, ವಿವಿಧ ಕಾಮಗಾರಿಗಳಿಗೆ ಪಟ್ಟಣದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ನಗರಕ್ಕೆ ಸಂಚಾರ ಪೊಲೀಸ್ ಠಾಣೆ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಮಾಡಿಸುತ್ತೇನೆ. ತಾವು ಭರವಸೆ ಕೊಟ್ಟರೆ ಅದನ್ನು ನೆರವೇರಿಸಿಯೇ ಸಿದ್ಧ. 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಒಂದು ಕ್ರಾಂತಿಕಾರಿ ಯೋಜನೆ. ಅದಕ್ಕಾಗಿ ನೀರಾವರಿ ಸಚಿವ ಮಾಧು ಸ್ವಾಮಿ ಅವರ ಶ್ರಮ ಅಭಿನಂದನೀಯ’ ಎಂದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಹಾಗೂ ಬೆಂಗಳೂರು ಗ್ರಾಮಂತರ ಉಸ್ತುವಾರಿ ಸಚಿವ ಆರ್.ಅಶೋಕ್ ಮಾತನಾಡಿ, ‘ಹೊಸಕೋಟೆ ಬೆಂಗಳೂರಿಗೆ ಬಹಳ ಹತ್ತಿರವಿದ್ದು ಇದೂ ಸಹ ಬೆಂಗಳೂರಿನ ಮಾದರಿಯಲ್ಲಿ ಅಭಿವೃದ್ದಿ ಯಾಗಬೇಕು. ಈಗಾಗಲೇ ಸರ್ಕಾರಿ ಭೂಮಿಯಲ್ಲಿ ಯಾರಾದರೂ ಮನೆ ಕಟ್ಟಿಕೊಂಡಿದ್ದರೆ ಅಂತವರಿಗೆ 94c ಹಾಗೂ 94cc ಯಡಿಯಲ್ಲಿ ಹಕ್ಕುಪತ್ರ ನೀಡಲಾಗುತ್ತದೆ’ ಎಂದರು.

‘ನೆರೆ ಪರಿಸ್ಥಿಯನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಸಚಿವರು, 2 ಲಕ್ಷ 4 ಸಾವಿರ ಜನರಿಗೆ ಈಗಾಗಲೆ ₹ 10 ಸಾವಿರ ಬಿಡುಗಡೆ ಮಾಡಲಾಗಿದ್ದು ಮನೆಕಳೆದುಕೊಂಡವರಿಗೆ ಮನೆ ಕಟ್ಟಲು ಮುಂಚಿತವಾಗಿಯೇ ₹ 5 ಲಕ್ಷ ಬಿಡುಗಡೆ ಮಾಡಲಾಗುತ್ತದೆ. ಅನುಮಾನವಿದ್ದರೆ ವಿರೋಧ ಪಕ್ಷದವರು ಆಯಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಿ. ಕೇಂದ್ರ ಸರ್ಕಾರವೂ ಸಹ ಈಗಾಗಲೇ ಸಾಕಷ್ಟು ಹಣ ಬಿಡುಗಡೆ ಮಾಡಿದ್ದು ವಿರೋಧ ಪಕ್ಷಗಳು ಸುಮ್ಮ ಸುಮ್ಮನೇ ಆರೋಪಿಸುತ್ತಿವೆ’ ಎಂದರು.

ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯದೇವಯ್ಯ, ಯಲಹಂಕ ಶಾಸಕ ವಿಶ್ವನಾಥ್, ಮಾಜಿ ಜಿಲ್ಲಾಧಿಕಾರಿ ಸಿ. ಸೋಮಶೇಖರ್, ಸಿ. ಜಯರಾಜ್. ಲಕ್ಷ್ಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.