ADVERTISEMENT

ದೊಡ್ಡಬಳ್ಳಾಪುರ: ಹೋರಾಟದ ಫಲವಾಗಿ ಉಳಿದ ಚನ್ನಗಿರಿ

ಪಂಚಗಿರಿ ಶ್ರೇಣಿಯ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 3:20 IST
Last Updated 6 ಅಕ್ಟೋಬರ್ 2021, 3:20 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟಕ್ಕೆ ಗಣಿಗಾರಿಕೆ ಲಾರಿಗಳು ಹೋಗದಂತೆ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಹಾಕುತ್ತಿರುವ ಹೋರಾಟಗಾರರು (ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟಕ್ಕೆ ಗಣಿಗಾರಿಕೆ ಲಾರಿಗಳು ಹೋಗದಂತೆ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಹಾಕುತ್ತಿರುವ ಹೋರಾಟಗಾರರು (ಸಂಗ್ರಹ ಚಿತ್ರ)   

ದೊಡ್ಡಬಳ್ಳಾಪುರ: ‘ನನಗೆ ಆರು ತಿಂಗಳ ಕಾಲ ಅವಕಾಶ ನೀಡಿದರೆ ಚಿಕ್ಕಬಳ್ಳಾಪುರ ನಗರ ದೊಡ್ಡಬಳ್ಳಾಪುರಕ್ಕೆ ಕಾಣುವಂತೆ ಮಾಡುತ್ತೇನೆ’ ಹೀಗೆ ಹೋರಾಟಗಾರರಿಗೆ ಸವಾಲು ಹಾಕಿದ್ದ ಪಂಚಗಿರಿ ಶ್ರೇಣಿ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದ ಮಾಲೀಕ.

ಚನ್ನರಾಯಸ್ವಾಮಿ ಬೆಟ್ಟದಲ್ಲಿ ಬೃಹತ್‌ ಪ್ರಮಾಣದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲುಗಣಿಗಾರಿಕೆ ಕುರಿತಂತೆ 2007ರಲ್ಲಿ ಪ್ರಥಮ ಬಾರಿಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗುವ ಮೂಲಕ ಸಾರ್ವಜನಿಕರ ಗಮನಕ್ಕೆ ಬಂದಿತ್ತು. ವರದಿ ಪ್ರಕಟವಾದ ನಂತರ ರಾಜ್ಯ ರೈತ ಸಂಘದ ಮುಖಂಡರಾಗಿದ್ದ ದಿವಂಗತ ಡಾ.ವೆಂಕಟರೆಡ್ಡಿ ಅವರ ನೇತೃತ್ವದಲ್ಲಿ ಸ್ಥಳೀಯ ರೈತರು ಗಣಿಗಾರಿಕೆ ನಿಲ್ಲಿಸುವಂತೆ ಹೋರಾಟ ತೀವ್ರಗೊಳಿಸಿದ್ದರು.

ಸತತ ಆರು ತಿಂಗಳ ಹೋರಾಟದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ದೊಡ್ಡಬಳ್ಳಾಪುರ ತಾಲ್ಲೂಕು ತಹಶೀಲ್ದಾರ್‌ ಗಣಿಗಾರಿಕೆ ನಡೆಯುತ್ತಿರುವ ಸಂಪೂರ್ಣ ಸ್ಥಳ ಅರಣ್ಯ ಇಲಾಖೆಗೆ ಒಳಪಟ್ಟಿದೆ. ಗಣಿಗಾರಿಕೆಗೆ ಯಾವುದೇ ಪರವಾನಗಿ ಪಡೆಯದೇ ಇರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಅರಣ್ಯ ಸಚಿವರಾಗಿದ್ದ ಚನ್ನಿಗಪ್ಪ ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಗಣಿಗಾರಿಕೆ ತಕ್ಷಣ ನಿಲ್ಲಿಸುವಂತೆ ಆದೇಶ ಮಾಡಿದ್ದರು.

ADVERTISEMENT

ಇಷ್ಟಾದರೂ ಗಣಿಗಾರಿಕೆ ಸಂಪೂರ್ಣವಾಗಿ ನಿಲ್ಲದೆ ಸ್ಥಳೀಯ ಕೆಲ ಮುಖಂಡರ ಸಹಕಾರದಿಂದ ಕದ್ದುಮುಚ್ಚಿ ನಡೆಯುತ್ತಲೇ ಇತ್ತು. ಮತ್ತೆ ಹೋರಾಟ ಆರಂಭಿಸಿದ ರೈತರು ಬೆಟ್ಟಕ್ಕೆ ಹೋಗುವ ಎಲ್ಲಾ ರಸ್ತೆ ಕಲ್ಲುಬಂಡೆಗಳಿಂದ ಬಂದ್‌ ಮಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತರುವ ಮೂಲಕ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆ ಜೆಸಿಬಿ ಯಂತ್ರಗಳ ಮೂಲಕ ಕಾಲುವೆ ತೋಡಿಸಲಾಯಿತು. ಇಷ್ಟೆಲ್ಲ ಹೋರಾಟದ ಫಲವಾಗಿ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಎಲ್ಲ ರೀತಿಯ ಗಣಿಗಾರಿಕೆ ಸಂಪೂರ್ಣವಾಗಿ ಸ್ಥಗಿತವಾಗಿ ಇಂದಿನ ಪೀಳಿಗೆಯವರು ಬೆಟ್ಟ ನೋಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.