ADVERTISEMENT

ಹುಲುಕಡಿ ಬೆಟ್ಟದಲ್ಲಿ ಗಣಿಗಾರಿಕೆ, ಆಕ್ರೋಶ

ಪ್ರಥಮ ದೊಡ್ಡಬಳ್ಳಾಪುರ ತಾಲ್ಲೂಕು ಪರಿಸರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 13:21 IST
Last Updated 16 ಜೂನ್ 2019, 13:21 IST
ಪರಿಸರ ಸಮ್ಮೇಳನದಲ್ಲಿ ನೀರು ಕುರಿತ ಸಂವಾದ ಗೋಷ್ಠಿಯಲ್ಲಿ ಸಾವಯವ ಕೃಷಿಕ ಎಂ.ಆರ್‌. ಸೀತಾರಾಂ ಮಾತನಾಡಿದರು
ಪರಿಸರ ಸಮ್ಮೇಳನದಲ್ಲಿ ನೀರು ಕುರಿತ ಸಂವಾದ ಗೋಷ್ಠಿಯಲ್ಲಿ ಸಾವಯವ ಕೃಷಿಕ ಎಂ.ಆರ್‌. ಸೀತಾರಾಂ ಮಾತನಾಡಿದರು   

ದೊಡ್ಡಬಳ್ಳಾಪುರ: ಐತಿಹಾಸಿಕ ಹುಲುಕಡಿ ಬೆಟ್ಟ ಸೇರಿದಂತೆ ಹಳೆಕೋಟೆ ಗ್ರಾಮದ ಬೆಟ್ಟದಲ್ಲಿ 30ಕ್ಕೂ ಹೆಚ್ಚು ಕಂಪನಿಗಳು ಹೊಸದಾಗಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡುವ ಹಂತಕ್ಕೆ ಬಂದಿದೆ. ಗಣಿಗಾರಿಕೆ ಪ್ರಾರಂಭವಾದರೆ ಕೆಲವೇ ತಿಂಗಳಲ್ಲಿ ಚೋಳರ ಕಾಲದ ಐತಿಹಾಸಿಕ ವೀರಭದ್ರಸ್ವಾಮಿ ದೇವಾಲಯ ಇರುವ ಬೆಟ್ಟ ಕರಗಿ ಹೋಗಲಿದೆ ಎಂದು ಇತಿಹಾಸ ತಜ್ಞ ಡಾ. ಎಸ್‌. ವೆಂಕಟೇಶ್‌ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ಪ್ರಥಮ ತಾಲ್ಲೂಕು ಪರಿಸರ ಸಮ್ಮೇಳನದಲ್ಲಿ ನೀರು ಕುರಿತ ಸಂವಾದ ಗೋಷ್ಠಿಯಲ್ಲಿ ಮಾತನಾಡಿದರು.

ಹುಲುಕಡಿ ಬೆಟ್ಟ ತಾಲ್ಲೂಕಿನಲ್ಲೇ ಅತ್ಯಂತ ಐತಿಹಾಸಿಕ ಮಹತ್ವವನ್ನು ಹೊಂದಿರುವ ಬೆಟ್ಟಗಳಲ್ಲಿ ಪ್ರಮುಖವಾಗಿದೆ. ಬೆಟ್ಟದಲ್ಲಿ ಇಂದಿಗೂ ಕೋಟೆ, ದೇವಾಲಯ ಸುಭದ್ರವಾಗಿವೆ. ಅಲ್ಲದೆ ಜೀವ ವೈವಿಧ್ಯದ ದೃಷ್ಟಿಯಿಂದಲೂ ಹುಲುಕಡಿ ಬೆಟ್ಟ ಅತ್ಯಂತ ಮಹತ್ವದ್ದಾಗಿದೆ. ಈ ಭಾಗದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವುದು ಖಂಡನೀಯ. ಪರಿಸರಾಸಕ್ತರು ಎಚ್ಚೆತ್ತುಕೊಂಡು ಕಲ್ಲು ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಹೋರಾಟ ರೂಪಿಸುವ ಅಗತ್ಯವಿದೆ ಎಂದರು.

ADVERTISEMENT

ಸಂವಾದದಲ್ಲಿ ಮಾತನಾಡಿದ ತಾಲ್ಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷೆ ಕೆ. ಸುಲೋಚನಮ್ಮ ವೆಂಕಟರೆಡ್ಡಿ, ಶುದ್ಧ ಕುಡಿಯುವ ನೀರು ಕೊಡುವ ಸರ್ಕಾರದ ಯೋಜನೆ ಅಂತರ್ಜಲ ವಿರೋಧಿಯಾಗಿದೆ. 1 ಲೀಟರ್‌ ಶುದ್ಧ ಕುಡಿಯುವ ನೀರು ಪಡೆಯಲು 2 ಲೀಟರ್‌ ನೀರು ವ್ಯರ್ಥವಾಗಿ ಚರಂಡಿ ಸೇರುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸುವಾಗಲೇ ವ್ಯರ್ಥ ನೀರನ್ನು ಮರುಬಳಕೆ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಬೇಕಿತ್ತು ಎಂದರು.

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸುಮಾರು 250ಕ್ಕೂ ಹೆಚ್ಚು ಶುದ್ದಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಇವುಗಳಿಂದ ಪ್ರತಿ ದಿನ ನೂರಾರು ಲೀಟರ್‌ ನೀರು ವ್ಯರ್ಥವಾಗಿ ಚರಂಡಿ ಸೇರುತ್ತಿದೆ. ನಗರದಲ್ಲಿ ನೀರಿನ ಬವಣೆ ತೀವ್ರವಾಗಲು ಮುಖ್ಯ ಕಾರಣವಾಗಿರುವುದೇ ಶುದ್ಧ ಕುಡಿಯುವ ನೀರಿಗೆ ಹೆಚ್ಚಿನ ನೀರು ಬಳಕೆಯಾಗುತ್ತಿರುವುದು. ವ್ಯರ್ಥ ನೀರನ್ನು ಪಾರ್ಕ್‌, ಶೌಚಾಲಯ ಸೇರಿದಂತೆ ಇತರೆ ಬಳಕೆಗಳಿಗೆ ಉಪಯೋಗವಾಗುವಂತೆ ತುರ್ತಾಗಿ ಮಾಡಬೇಕಾಗಿದೆ ಎಂದರು.

ತಾಲ್ಲೂಕಿನ ಹುಲುಕಡಿ ಬೆಟ್ಟದ ಸಾಲಿನ ಚನ್ನವೀರನಹಳ್ಳಿ ಗ್ರಾಮದ ಕೆರೆಯಲ್ಲಿ ವರ್ಷವಿಡೀ ನೀರು ಸಂಗ್ರಹವಾಗಿರುತ್ತವೆ. ಇಂತಹ ಐತಿಹಾಸಿಕ ಕೆರೆ ಕಲ್ಲು ಗಣಿಗಾರಿಕೆಯಿಂದ ಹೂಳು ತುಂಬಿಕೊಂಡು ಕೆರೆಯೇ ಕಣ್ಮರೆಯಾಗುವ ಅಪಾಯ ಎದುರಾಗಿದೆ. ಹುಲುಕಡಿ ಬೆಟ್ಟ ಸಾಲಿನ ಹಳೇಕೋಟೆ ಗ್ರಾಮದ ಸಮೀಪ ಗಣಿಗಾರಿಕೆಗೆ ಅನುಮತಿ ನೀಡಿರುವುದೇ ಅವೈಜ್ಞಾನಿಕ ಕ್ರಮವಾಗಿದೆ ಎಂದರು.

ನೀರು ಕುರಿತ ಸಂವಾದ ಗೋಷ್ಠಿಯ ಅಧ್ಯಕ್ಷೆ ವಹಿಸಿದ್ದ ಸಾವಯವ ಕೃಷಿಕ ಎಂ.ಆರ್‌. ಸೀತಾರಾಂ ಮಾತನಾಡಿ, ‘ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಹಳೇಕೋಟೆ ಸುತ್ತಲಿನ ಬೆಟ್ಟದ ತಪ್ಪಲಿನ ಆರು ಎಕರೆ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಸಲು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಈಗ ಮೂರು ಕಂಪನಿಗಳಿಂದ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಎರಡು ಕಂಪನಿಗಳ ಗಣಿಗಾರಿಕೆ ಗುತ್ತಿಗೆ ಇದೇ ಡಿಸೆಂಬರ್‌ ಅಂತ್ಯಕ್ಕೆ ಮುಕ್ತಾಯವಾಗುವ ಬಗ್ಗೆ ಮಾಹಿತಿ ಇದೆ’ ಎಂದರು.

ಜಲ ಮೂಲಗಳನ್ನು ಉಳಿಸಿಕೊಳ್ಳುವಲ್ಲಿ ಕೆಲಸ ಮಾಡಿರುವ ಪರಿಸರ ಸಿರಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಸಭೆಗೆ ಮಾಹಿತಿ ನೀಡಿ, ಸಾಸಲು ಹೋಬಳಿಯ ಮಾಕಳಿ ಬೆಟ್ಟದ ಮೇಲೆ ಸಾವಿರಾರು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದ್ದ ಕಲ್ಯಾಣಿಗಳು ಮಣ್ಣು, ಕಲ್ಲುಗಳಿಂದ ತುಂಬಿಕೊಂಡು ಹಾಳಾಗಿದ್ದವು. ಮಳೆ ನೀರು ಸಂಗ್ರಹವಾಗಲು ಸ್ಥಳ ಇಲ್ಲದೆ ಹೊರಗೆ ಹರಿದು ಹೋಗುತ್ತಿದ್ದವು. ಸುಮಾರು 4,000 ಅಡಿಗಳಷ್ಟು ಎತ್ತರದ ಬೆಟ್ಟದಲ್ಲಿ ಮಾಕಳಿ ಮಲ್ಲೇಶ್ವರ ಸೇವಾಭಿವೃದ್ದಿ ಟ್ರಸ್ಟ್‌ನ ಅಡಿಯಲ್ಲಿ 30 ಭಾನುವಾರಗಳಂದು ಸ್ವಯಂ ಸ್ಪೂರ್ತಿಯಿಂದ ಶ್ರಮದಾನ ಮಾಡುವ ಮೂಲಕ ಪುರಾತನ ಕಲ್ಯಾಣಿಗಳಲ್ಲಿನ ಹೂಳು ತೆಗೆದು ಅಭಿವೃದ್ದಿಪಡಿಸಲಾಗಿದೆ. ಇದೇ ರೀತಿಯಲ್ಲಿ ಬೆಟ್ಟದ ಮೇಲಿದ್ದ ಹಲವಾರು ನೀರು ಸಂಗ್ರಹದ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ. ಇದೊಂದು ಆತ್ಮತೃಪ್ತಿಯ ಕೆಲಸವಾಗಿದೆ ಎಂದರು.

ದೊಡ್ಡಬಳ್ಳಾಪುರ ಸೇರಿದಂತೆ ಗ್ರಾಮಾಂತರ ಜಿಲ್ಲೆಯಲ್ಲಿ 8 ತಿಂಗಳಿಂದ ಜಿಲ್ಲಾಧಿಕಾರಿ ಕರೀಗೌಡ ಅವರ ನೇತೃತ್ವದಲ್ಲಿ ಸರ್ಕಾರದ ಯಾವುದೇ ಅರ್ಥಿಕ ನೆರವು ಸಹ ಇಲ್ಲದೆ ಜನರ ಸಹಭಾಗಿತ್ವದಲ್ಲಿಯೇ 30 ಕೆರೆಗಳ ಅಭಿವೃದ್ದಿ ಕೆಲಸಗಳು ನಡೆದಿವೆ. ಒಂದು ತಿಂಗಳಿಂದ ಈಚೆಗೆ ಸುರಿದ ಮಳೆಯಿಂದಾಗಿ ಅಭಿವೃದ್ದಿಗೊಳಿಸಲಾಗಿರುವ ಕೆರೆಗಳಲ್ಲಿ ಮಳೆ ನೀರು ಸಂಗ್ರಹವಾಗಿರುವುದು ಸಂತಸ ತಂದಿದೆ ಎಂದರು.

ವಕೀಲ ಲೋಕೇಶ್‌ ಮಾತನಾಡಿ, ‘ಈ ಹಿಂದೆ ಸಾಸಲು ಹೋಬಳಿಯ ಆರೂಢಿ ಗ್ರಾಮದಲ್ಲಿ ಬಿಬಿಎಂಪಿ ಕಸ ಸುರಿಯುವ ಘಟಕ ಸ್ಥಾಪಿಸುವ ಬಗ್ಗೆ ಮಾಹಿತಿಗಳು ತಿಳಿಯುತ್ತಿದ್ದಂತೆ ಸ್ಥಳೀಯ ರೈತರು ಹೋರಾಟ ನಡೆಸಿದ್ದರಿಂದ ಕಸ ಸಂಗ್ರಹ ಘಟಕ ಪ್ರಾರಂಭಿಸುವ ಯೋಜನೆ ರದ್ದುಗೊಂಡಿತು. ಇದೇ ಮಾದರಿಯಲ್ಲಿ ಹುಲುಕಡಿ ಬೆಟ್ಟದ ತಪ್ಪಲಿನಲ್ಲೂ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡದಂತೆ ಈಗಿನಿಂದಲೇ ಹೋರಾಟಕ್ಕೆ ಮುಂದಾಗಬೇಕಿದೆ. ಹುಲುಕಡು ಬೆಟ್ಟದ ಸಾಲಿನ ಗ್ರಾಮಗಳಲ್ಲಿ ಸಾಕಷ್ಟು ಜನ ವಿದ್ಯಾವಂತರು ಅದರಲ್ಲೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪ್ರಜ್ಞಾವಂತ ಜನರು ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದರು.

ಸಂವಾದ ಸಂಸ್ಥೆಯ ಕೆ.ಜನಾರ್ಧನ ಮಾತನಾಡಿ, ‘ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಬರುವ ಅರ್ಕಾವತಿ ನದಿ ಪಾತ್ರದ ಐದು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ, ಅಪಾರ್ಟ್‌ಮೆಂಟ್‌ಗಳ ನಿರ್ಮಾಣ, ಕಸ ಸಂಗ್ರಹ, ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು 2003ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು’ ಎಂದರು.

‘ಆದರೆ ಬಿಲ್ಡರ್‌ಗಳ ಲಾಭಿಗೆ ಮಣಿದ ರಾಜ್ಯ ಸರ್ಕಾರ 2014ರಲ್ಲಿ ತಾನೇ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಿತು. ಅಧಿಸೂಚನೆ ಹಿಂದಕ್ಕೆ ಪಡೆದಿರುವ ಸರ್ಕಾರದ ನಿರ್ಧಾರಕ್ಕೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಕಾರಣ ಕೇಳಿದೆ. ಈ ಭಾಗದಲ್ಲಿ ಜಲಮೂಲಗಳು ಕಲುಷಿತವಾಗದಂತೆ ತಡೆಯಲು, ಜಲಮೂಲಗಳನ್ನು ಉಳಿಸಿಕೊಳ್ಳಲು 2003ರ ಅಧಿಸೂಚನೆ ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಆಗಬೇಕಿದೆ’ ಎಂದರು.

ತಾಲ್ಲೂಕಿನ ನೀರಿನ ಸ್ಥಿತಿಗತಿ ಕುರಿತ ಸಂಕ್ಷಿಪ್ತ ವರದಿಯನ್ನು ಅನಿಕೇತನ ಟ್ರಸ್ಟ್‌ ಕಾರ್ಯದರ್ಶಿ ಡಿ.ಶ್ರೀಕಾಂತ ಮಂಡಿಸಿದರು. ಏಟ್ರಿ ಸಂಸ್ಥೆಯ ಮಂಜುನಾಥ್‌, ರಾಜ್ಯ ರೈತ ಸಂಘದ ಹಿರಿಯ ಮುಖಂಡ ಮುತ್ತೇಗೌಡ ಸಂವಾದದಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.