ADVERTISEMENT

ಪುರಸಭೆ ಚುನಾವಣೆ: ಶಾಂತಿಯುತ ಮತದಾನ 

ವಾರ್ಡ್‌ಗಳ ಬಳಿ ಬೆಂಬಲಿಗರು ಮತ ಯಾಚನೆ

​ಪ್ರಜಾವಾಣಿ ವಾರ್ತೆ
Published 29 ಮೇ 2019, 13:38 IST
Last Updated 29 ಮೇ 2019, 13:38 IST
ಮತ ಚಲಾಯಿಸಿದ ವಯೋವೃದ್ಧೆ ಅಕ್ಕಯಮ್ಮ 
ಮತ ಚಲಾಯಿಸಿದ ವಯೋವೃದ್ಧೆ ಅಕ್ಕಯಮ್ಮ    

ದೇವನಹಳ್ಳಿ: ಪುರಸಭೆವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಮತ ಪಟ್ಟಿ ಗೊಂದಲದ ನಡುವೆ ಶಾಂತಿಯುತ ಮತದಾನ ನಡೆಯಿತು. ಬೆಳಿಗ್ಗೆ 7 ರಿಂದ ಆರಂಭವಾದ ಮತದಾನ ಸಂಜೆ 5 ರವರೆಗೆ ಮುಂದುವರೆಯಿತು.

20 ನೇ ವಾರ್ಡಿನ ಮತಗಟ್ಟೆಯಲ್ಲಿ ಮತದಾನ ಮಾಡಿದ ಮತದಾರರಿಗೆ ಮತಗಟ್ಟೆ ನಾಲ್ಕನೆ ಅಧಿಕಾರಿ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಚ್ಚಿದರು. ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಮತದಾರರೊಬ್ಬರು ‘ಉಂಗುರದ ಬೆರಳಿಗೆ ಶಾಯಿ ಹಚ್ಚಬೇಕು. ಲೋಕಸಭಾ ಚುನಾವಣೆಯಲ್ಲಿ ತೋರು ಬೆರಳಿಗೆ ಶಾಯಿ ಹಚ್ಚಿದ್ದಾರೆ. ನಿಮಗೆ ಅಷ್ಟು ಗೊತ್ತಿಲ್ಲವೇ. ಐದೂ ಬೆರಳಿಗೆ ಶಾಯಿ ಹಚ್ಚುತ್ತೀರಾ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

20, 4, 2, 9, 18 ನೇ ವಾರ್ಡ್‌ಗಳ ಬಳಿ ಬೆಂಬಲಿಗರು ಮತ ಯಾಚಿಸಿದರು. 11ನೇ ಮತ್ತು 18ನೇ ವಾರ್ಡ್‌ಗಳಲ್ಲಿ 120 ಕ್ಕೂ ಹೆಚ್ಚು ಸ್ಥಳೀಯ ಮತದಾರರ ಹೆಸರು ಕೈಬಿಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ಈಗ ಪಟ್ಟಿಯಲ್ಲಿ ಹೆಸರಿಲ್ಲ ಎಂದು 11ನೇ ವಾರ್ಡಿನ ಸೋಮಣ್ಣ, 18ನೇ ವಾರ್ಡಿನ ಆಂಜಿನಪ್ಪ ದೂರಿದರು.

ADVERTISEMENT

ನಿಲೇರಿ ಮತಗಟ್ಟೆಯಲ್ಲಿ 6 ಮತದಾರರನ್ನು ಮರಣ ಹೊಂದಿದವರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇದನ್ನು ಪಾರದರ್ಶಕ ಮತದಾರರ ಪಟ್ಟಿ ಎಂದು ಹೇಗೆ ಕರೆಯಲು ಸಾಧ್ಯ ಎಂದು ಅಭ್ಯರ್ಥಿ ಅಂಬರೀಶ್‌ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಕುಟುಂಬ ಸಮೇತ 2 ನೇ ವಾರ್ಡಿನ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ನಿಲೇರಿ ಮತಗಟ್ಟೆಯಲ್ಲಿ 101 ವರ್ಷದ ಅಕ್ಕಯಮ್ಮ ಮತ ಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ ಕೈಕಾಲು ಸ್ವಾಧೀನ ಕಳೆದುಕೊಂಡಿರುವ ಮಹಿಳೆ ಮುನಿಅಕ್ಕಯಮ್ಮರನ್ನುವ್ಯಕ್ತಿಯೊಬ್ಬರು ಹೊತ್ತು ತಂದು ಮತದಾನ ಮಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.