ADVERTISEMENT

ಆನೇಕಲ್ | ರಸ್ತೆ ಗುಂಡಿ: ವಿಪರೀತ ವಾಹನ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 2:02 IST
Last Updated 20 ಆಗಸ್ಟ್ 2025, 2:02 IST
ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಕ್ರಾಸ್‌ನಲ್ಲಿ ರಸ್ತೆ ಹದಗೆಟ್ಟಿರುವುದು
ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಕ್ರಾಸ್‌ನಲ್ಲಿ ರಸ್ತೆ ಹದಗೆಟ್ಟಿರುವುದು   

ಆನೇಕಲ್ : ತಾಲ್ಲೂಕಿನ ಮುತ್ತಾನಲ್ಲೂರು-ಸರ್ಜಾಪುರ ರಸ್ತೆ ಹದಗೆಟ್ಟಿರುವುದರಿಂದ ಪ್ರತಿನಿತ್ಯ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆ ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. 

ಮುತ್ತಾನಲ್ಲೂರು ಕ್ರಾಸ್‌ ಬಳಿ ಮುಖ್ಯ ರಸ್ತೆಯಲ್ಲಿಯೇ ಗುಂಡಿಗಳು ಬಿದ್ದಿವೆ. ಗುಂಡಿಗಳನ್ನು ತಪ್ಪಿಸಲು ಸಾರ್ವಜನಿಕರು ಅತ್ತಿಂದಿತ್ತ ಸಂಚರಿಸುತ್ತಾರೆ. ಇದರಿಂದಾಗಿ ವಾಹನಗಳ ಉದ್ದನೆ ಸಾಲು ಹೆಚ್ಚಾಗುತ್ತಿದೆ. ರಸ್ತೆ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದೆ. ಮುಖ್ಯ ರಸ್ತೆಯು ಕೆಸರು ಗದ್ದೆಯಂತಾಗಿದ್ದು ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಅಗ್ಗದ ಮೇಲಿನ ನಡಿಗೆಯಂತೆ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆಯಲ್ಲಿ ಶಾಲಾ ಮಕ್ಕಳು ಸಂಚರಿಸಲು ಸಮಸ್ಯೆಯಾಗುತ್ತಿದೆ. ಈ ರಸ್ತೆಯಲ್ಲಿ ಹಲವು ಶಾಲಾ–ಕಾಲೇಜುಗಳಿವೆ. ವಾಹನಗಳ ಉದ್ದನೆ ಸಾಲಿನಿಂದಾಗಿ ಪ್ರತಿನಿತ್ಯ ಶಾಲೆಗೆ ಹೋಗುವುದು ತಡವಾಗುತ್ತಿದೆ. ಜತೆಗೆ ಈ ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತಿದೆ ಎಂದು ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

ADVERTISEMENT

ರಸ್ತೆ ಗುಂಡಿಯಿಂದಾಗಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಕಿರಿಕಿರಿ ಹೆಚ್ಚಾಗಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಲು ಪ್ರಯಾಣಿಕರು ಹಿಡಿಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ. ಮುತ್ತಾನಲ್ಲೂರು ಕ್ರಾಸ್‌ನಲ್ಲಿ ನಾಲ್ಕು ಕಡೆ ಸಂಪರ್ಕ ರಸ್ತೆಗಳಾಗಿದ್ದು ರಸ್ತೆ ಗುಂಡಿಯಿಂದಾಗಿ ಸಮಸ್ಯೆಯಾಗಿದೆ. ಮುಖ್ಯ ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲು ಸಂಬಂಧಪಟ್ಟ ಇಲಾಖೆ ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ರಸ್ತೆ ಗುಂಡಿಗೆ ಮುಕ್ತಿ ನೀಡಿದ ಗ್ರಾಮಸ್ಥರು : ಮುತ್ತಾನಲ್ಲೂರು ಕ್ರಾಸ್‌ ಬಳಿ ರಸ್ತೆ ಗುಂಡಿಯಿಂದಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರೇ ಕ್ರಮವಹಿಸಿ ರಸ್ತೆ ಗುಂಡಿ ಮುಚ್ಚಿಸಿ ತಾತ್ಕಾಲಿಕವಾಗಿ ಪರಿಹಾರ ನೀಡಿದ್ದಾರೆ. ಸಂಬಂಧಪಟ್ಟ ಇಲಾಖೆ‌ಯವರು ರಸ್ತೆ ಗುಂಡಿಗಳನ್ನು ಮುಚ್ಚಲು ಗಮನ ನೀಡಬೇಕು ಎಂಬುದು ಮುತ್ತಾನಲ್ಲೂರು ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಆಗ್ರಹವಾಗಿದೆ.

ರಸ್ತೆ  ಗುಂಡಿಯಿಂದಾಗಿ ವಾಹನ ದಟ್ಟಣೆ ಉಂಟಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.