ವಿಜಯಪುರ (ದೇವನಹಳ್ಳಿ): ಗಡ್ಡದನಾಯಕನಹಳ್ಳಿ ದುರ್ಗಾ ಮಹೇಶ್ವರಿ ಅಮ್ಮನವರ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾಷ್ಟಮಿ ಮಹೋತ್ಸವ ಮೊದಲ ದಿನ ಮಂಗಳವಾರ ಆನೆ ಅಂಬಾರಿ ಉತ್ಸವಕ್ಕೆ ಜನಸಾಗರ ಹರಿದು ಬಂದಿತ್ತು.
ದೇವಾಲಯದಲ್ಲಿ ಬೆಳಗ್ಗೆ ಗಣಪತಿ ಪೂಜೆ, ಕಲಶಾರಾದನೆ, ಸ್ವಸ್ತಿ ಪುಣ್ಯಾಹವಾಚನ, ಪಂಚಗವ್ಯ ರಕ್ಷಾಬಂಧನ, ಕಲಶಾರಾಧನೆ, ಚಂಡಿ ಸಪ್ತಶತಿ ಪಾರಾಯಣ, ಗಣಪತಿ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ, ಮಹಾ ಪೂರ್ಣಾಹುತಿ ಸೇರಿದಂತೆ ಕುಂಬಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಪತ್ನಿ ನಯನಾ ಪ್ರದೀಪ್ ಈಶ್ವರ್ ಅವರು ಹೋಮ, ಕಳಶ ಹೊತ್ತು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ದುರ್ಗಾ ಮಹೇಶ್ವರಿ ಅಮ್ಮನವರ ಆಶೀರ್ವಾದ ಪಡೆದರು.
ಮಧ್ಯಾಹ್ನ 1ಕ್ಕೆ ಆನೆ ಅಂಬಾರಿ ಉತ್ಸವಕ್ಕೆ ವಿವಿಧ ಗಣ್ಯರಿಂದ ಚಾಲನೆ ದೊರೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಕಲಾತಂಡಗಳ ಮೆರಗು: ಮೆರವಣಿಗೆ ಉದ್ದಕ್ಕೂ ವೀರಭದ್ರ ಕುಣಿತ, ಡೊಳ್ಳು ಕುಣಿತ, ನವದುರ್ಗಿ ಕುಣಿತ, ಗಾರುಡಿ ಗೊಂಬೆ, ಕೀಲು ಕುಣಿತ ಮೆರಗು ನೀಡದವು. ಬೆಂಗಳೂರಿನ ಶೀಲಾನಾಯ್ಡು ಅವರಿಂದ ಆಯೋಜಿಸಿದ್ದ ಕಥಾಕಾಲಕ್ಷೇಪ, ಭರತ ನಾಟ್ಯ, ಸಂಜೆ ಮಂಗಳೂರಿನ ಪ್ರಸಿದ್ಧ ಕಲಾವಿದರಿಂದ ನಡೆದ ಯಕ್ಷಗಾನ ಭಕ್ತರನ್ನು ಮನಸೊರೆಗೊಳಿಸಿತು.
ವಿವಿಧೆಡೆಯಿಂದ ಭಕ್ತರ ಆಗಮನ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.