ದೇವನಹಳ್ಳಿ: ಸಾರ್ವಜನಿಕರು ಹಾಗೂ ಕ್ರೀಡಾಪಟುಗಳ ಸಧೃಢ ದೇಹ, ಆರೋಗ್ಯ ರಕ್ಷಣೆಗಾಗಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಆರಂಭಿಸಿರುವ ವ್ಯಾಯಾಮ ಶಾಲೆಗಳು ನಿರ್ವಹಣೆಯ ಕೊರತೆ ಎದುರಿಸುತ್ತಿವೆ.
ಹೊಸಕೋಟೆ ತಾಲ್ಲೂಕಿನಲ್ಲಿ ಗುತ್ತಿಗೆ ಆಧಾರದಲ್ಲಿ ನಿರ್ವಹಣೆಯಾಗುತ್ತಿರುವ ವ್ಯಾಯಾಮ ಶಾಲೆ (ಜಿಮ್) ಹೊರತುಪಡಿಸಿದರೆ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ದೇವನಹಳ್ಳಿ ತಾಲ್ಲೂಕಿನಲ್ಲಿನ ವ್ಯಾಯಾಮ ಶಾಲೆಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿವೆ. ಜಿಮ್‌ಗೆ ಬರುವವರಿಗೆ ಬೇಸರ ಮೂಡಿಸುವ ವಾತಾವರಣ ನಿರ್ಮಾಣವಾಗಿರುವ ಕುರಿತು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಪಾಯಕಾರಿ ಎಚ್ಚರಿಕೆ: ಇಲ್ಲಿನ ವ್ಯಾಯಾಮ ಪರಿಕರಗಳ ನಿರ್ವಹಣೆ (ಸರ್ವಿಸ್) ಕಡೆಗಣಿಸಲಾಗಿದೆ. ಟ್ರೆಡ್‌ಮಿಲ್, ಸೈಕಲ್ ಸೇರಿ ಇನ್ನಿತರ ಪರಿಕರಗಳ ಸರ್ವಿಸ್ ಮಾಡಿ ವರ್ಷಗಳೇ ಕಳೆದಿವೆ. ಟ್ರೆಡ್‌ಮಿಲ್ ನೆಲಹಾಸು ಸವೆದುಹೋಗಿದ್ದು, ನಡೆಯಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ವ್ಯಾಯಾಮ ಮಾಡುವವರು ಗಾಯಗೊಳ್ಳುವ ಅಪಾಯವಿದೆ.
ಹಣ ಕೊಡಲ್ಲ ಅಂತಾರೆ: ನೆಲಮಂಗಲದ ವ್ಯಾಯಾಮ ಶಾಲೆಯಲ್ಲಿ ಪ್ರತಿ ವ್ಯಕ್ತಿಯಿಂದ ತಿಂಗಳಿಗೆ ₹250, ದೊಡ್ಡಬಳ್ಳಾಪುರದಲ್ಲಿ ₹300 ಹಾಗೂ ದೇವನಹಳ್ಳಿಯಲ್ಲಿ ₹250 ಶುಲ್ಕ ಪಡೆಯಲಾಗುತ್ತಿದೆ. ಏನಿಲ್ಲವೆಂದರೂ ಕನಿಷ್ಠ ಒಂದೊಂದು ವ್ಯಾಯಾಮ ಶಾಲೆಯಿಂದ ತಿಂಗಳಿಗೆ ₹10 ಸಾವಿರ ಶುಲ್ಕ ಇಲಾಖೆಗೆ ಹೋಗುತ್ತಿದೆ. ಪ್ರತಿ ತಾಲ್ಲೂಕಿನ ವ್ಯಾಯಾಮ ಶಾಲೆಯ ತರಬೇತುದಾರರಿಗೆ ಗೌರವಧನ ಸಹ ನೀಡಲಾಗುತ್ತಿದೆ.
ವ್ಯಾಯಾಮ ಶಾಲೆಯ ನಿರ್ವಹಣೆಗೆ ಕೇಂದ್ರ ಕಚೇರಿಯಿಂದ ಬಿಡಿಗಾಸು ಸಿಗುತ್ತಿಲ್ಲ. ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಿಗೆ ಮನವಿ ಮಾಡಲಾಗಿದೆ. ಆದರೆ ಕೇಂದ್ರ ಕಚೇರಿಯ ಆಯುಕ್ತರಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಇಲಾಖೆಯೂ ಈ ವಿಷಯವನ್ನು ಕೈಚೆಲ್ಲಿದೆ. ಇದರ ಪರಿಣಾಮ ಪರಿಕರಗಳ ನಿರ್ವಹಣೆ ಕೊರತೆ ಕಾಡುತ್ತಿದೆ.
ಉಸ್ತುವಾರಿ ಸಚಿವರಿಗೆ ಪತ್ರ: ದೇವನಹಳ್ಳಿಯಲ್ಲಿ ಕ್ರೀಡಾಂಗಣದಲ್ಲಿ ಗಾಳಿ, ಬೆಳಕು ಸಮರ್ಪಕವಾಗಿಲ್ಲದ ಕಿರಿದಾದ ಕೊಠಡಿಯಲ್ಲಿ ವ್ಯಾಯಾಮ ಶಾಲೆ ನಡೆಸಲಾಗುತ್ತಿದೆ. ಇಲ್ಲಿನ ಜಿಮ್ ಪರಿಕರಗಳು ನಿರ್ವಹಣೆ ಇಲ್ಲದೆ ದುಸ್ಥಿತಿ ತಲುಪಿವೆ. ಆದ್ದರಿಂದ ವ್ಯಾಯಾಮ ಶಾಲೆಯ ನಿರ್ವಹಣೆಗೆ ಒತ್ತು ನೀಡಬೇಕು. ಜಿಮ್‌ಗಾಗಿ ಹೊಸ ಕಟ್ಟಡ ನಿರ್ಮಿಸಿ ಪರಿಕರಗಳ ದುರಸ್ತಿಗೆ ಮುಂದಾಗಬೇಕು. ಈ ಸಂಬಂಧ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಬೇಕು ಎಂದು ನೂರಾರು ಮಂದಿ ಸಹಿ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಸಚಿವರಿಂದ ಈವರೆಗೆ ಯಾವುದೇ ಸ್ಪಂದನೆ ಬಂದಿಲ್ಲ ಎಂದು ಜನರು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ಶಾಸಕರಿಗೂ ಮನವಿ: ದೊಡ್ಡಬಳ್ಳಾಪುರ ಶಾಸಕರಿಗೂ ಪತ್ರ ಬರೆದಿದ್ದು ಹಾಳಾಗಿರುವ ಜಿಮ್ ಪರಿಕರಗಳ ಪಟ್ಟಿ ಮಾಡಿದ್ದಾರೆ. ಹಾಗೆಯೇ ನೆಲಮಂಗಲ ಶಾಸಕರಿಗೂ ಪತ್ರ ಬರೆದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. ಆದರೆ ಜನಪ್ರತಿನಿಧಿಗಳು ಜಾಣಮೌನ ಮುರಿಯುತ್ತಿಲ್ಲ. ವ್ಯಾಯಾಮ ಶಾಲೆ ಇದ್ದರೂ ಬಳಸದಂತ ಪರಿಸ್ಥಿತಿ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.