
ದೊಡ್ಡಬಳ್ಳಾಪುರ: ಹೊಸ ವರ್ಷಾಚರಣೆ ಸಮಯದಲ್ಲಿ ರಾತ್ರಿ ಹೆಚ್ಚಿನ ಸಮಯದವರೆಗೆ ಸಂಭ್ರಮಾಚರಣೆ ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಪೊಲೀಸರ ಅನುಮತಿ ಇಲ್ಲದೆ ದೊಡ್ಡಮಟ್ಟದ ಸಂಭ್ರಮಚರಣೆ ಆಯೋಜಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಪಾಂಡುರಂಗ ಎಚ್ಚರಿಕೆ ನೀಡಿದ್ದಾರೆ.
ಸಂಚಾರ ಸುರಕ್ಷತಾ ಸಪ್ತಾಹ ಪ್ರಯುಕ್ತ ಜಿಲ್ಲಾ ಪೊಲೀಸ್ ವತಿಯಿಂದ ಶನಿವಾರ ನಗರದಲ್ಲಿ ನಡೆದ ಹೆಲ್ಮೆಟ್ ಅರಿವು ಮತ್ತು ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಸ ವರ್ಷಾಚರಣೆ ವೇಳೆ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲೂ ಡಿ.31ರವರೆಗೆ ಬೈಕ್, ಕಾರು ಸೇರಿದಂತೆ ವಾಹನಗಳ ತಪಾಸಣೆ ಆರಂಭಿಸಲಾಗಿದೆ. ಕುಡಿದು ವಾಹನಗಳ ಚಾಲನೆ ಮಾಡುವುದು, ವೀಲ್ಹೇ ಮಾಡುವವರಿಗೆ ದಂಡ ವಿಧಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಹೆಲ್ಮೆಟ್ ಧರಿಸದ ಕಾರಣದಿಂದಲೇ ಅಪಘಾತಗಳಲ್ಲಿ ಹೆಚ್ಚಿನ ಸಾವುಗಳು ಸಂಭವಿಸುತ್ತಲೇ ಇವೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಸಂಚಾರ ನಿಯಮ ಪಾಲನೆ ಮಾಡದಿರುವುದರಿಂದ ಅಪಘಾತ ಹಾಗೂ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ತಪಾಸಣೆಯ ಹೊಸ ವರ್ಷಾಚರಣೆಗೆ ಮಾತ್ರ ಸೀಮಿತವಾಗದೆ ನಿರಂತರವಾಗಿ ನಡೆಯಲಿದೆ. ಬೈಕ್ ಸೇರಿದಂತೆ ಇತರೆ ವಾಹನಗಳವರು ಅಗತ್ಯ ದಾಖಲೆ, ಚಾಲನ ಪರವಾನಗಿಯನ್ನು ಕಡ್ಡಾಯವಾಗಿ ಹೊಂದರಬೇಕು ಎಂದು ತಿಳಿಸಿದರು.
ಪೊಲೀಸರು ಹೆಲ್ಮೆಟ್ ಧರಿಸಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬೈಕ್‌ನಲ್ಲಿ ಸಂಚರಿಸಿ ಜನರಲ್ಲಿ ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಿದರು. ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಮರೇಶ್‌ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.