ADVERTISEMENT

ಕೊಕ್ಕರೆ ಕೊರಳಿಗೆ ನೈಲಾನ್‌ ಉರುಳು, ಪ್ರಾಣ ಬಿಡುತ್ತಿರುವ ಪಕ್ಷಿಗಳು

ತಮ್ಮದಲ್ಲದ ತಪ್ಪಿಗೆ ಪ್ರಾಣ ಬಿಡುತ್ತಿರುವ ಪಕ್ಷಿಗಳು

ನಟರಾಜ ನಾಗಸಂದ್ರ
Published 23 ಜನವರಿ 2023, 4:13 IST
Last Updated 23 ಜನವರಿ 2023, 4:13 IST
ಕಾಲಿಗೆ ದಾರ ಸುತ್ತಿಕೊಂಡು ಮೇಲೆ ಹಾರಲಾಗದೆ ಮೃತಪಟ್ಟಿರುವ ಕೊಕ್ಕರೆ
ಕಾಲಿಗೆ ದಾರ ಸುತ್ತಿಕೊಂಡು ಮೇಲೆ ಹಾರಲಾಗದೆ ಮೃತಪಟ್ಟಿರುವ ಕೊಕ್ಕರೆ   

ದೊಡ್ಡಬಳ್ಳಾಪುರ: ದಶಕಗಳ ನಂತರ ತಾಲ್ಲೂಕಿನ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ಹೀಗಾಗಿ ಆಹಾರ ಹುಡುಕುತ್ತ ದೂರ ದೂರುಗಳಿಂದ ಕೆರೆ ಅಂಗಳಕ್ಕೆ ಹೋಗುವ ಕೊಕ್ಕರೆಗಳು ಧಣಿವಾರಿಸಿಕೊಳ್ಳಲು ಕೆರೆಗಳದಲ್ಲಿ ಬೆಳೆದು ನಿಂತಿರುವ ಜಾಲಿ ಮರ, ಬಿದಿರು ಸೇರಿದಂತೆ ಇತರೆ ಮರಗಳ ರಂಬೆಗಳ ಮೇಲೆ ಕುಳಿತು ತಮ್ಮದಲ್ಲದ ತಪ್ಪಿಗೆ ಬಲಿಯಾಗುತ್ತಿವೆ.

ನಗರದ ಅಂಚಿನ ನಾಗರಕೆರೆ, ಅರಳುಮಲ್ಲಿಗೆ, ಶಿವಪುರ, ಬಾಶೆಟ್ಟಿಹಳ್ಳಿ, ಕೋಡಿಹಳ್ಳಿ ಸೇರಿದಂತೆ ಇತರೆ ಕೆರೆಗಳಿಗೆ ಪ್ರತಿ ದಿನ ಬೆಳಗಾಗುತ್ತಲೆ ಆಹಾರ ಹುಡುಕಿಕೊಂಡು ಕುಟುಂಬ ಸಮೇತ ಹಾರಿ ಬರುವ ನೂರಾರು ಬಿಳಿ ಬಣ್ಣದ ಕೊಕ್ಕರೆಗಳು ಬಹುತೇಕ ರಾತ್ರಿಯನ್ನು ಸಹ ಕೆರೆಯಲ್ಲಿನ ಮರಗಳಲ್ಲೇ ಕಾಲಕಳೆಯುತ್ತವೆ.

ಆದರೆ ಇತ್ತೀಚೆಗೆ ಕೊಕ್ಕರೆಗಳು ಮರದ ರಂಬೆಗಳಲ್ಲಿ ತಲೆಕೆಳಗಾಗಿ ನೇತಾಡುತ್ತ ಪ್ರಾಣ ಕಳೆದುಕೊಂಡಿರುವ ದೃಶ್ಯವನ್ನು ಕಂಡು ಪಕ್ಷಿ ಪ್ರಿಯರು ಮರುಗುವಂತಾಗಿದೆ. ಕೊಕ್ಕರೆಗಳ ಸಾವಿನ ಬಗ್ಗೆ ಕಾರಣ ಹುಡುಕುತ್ತ ಹೊರಟ ಯುವ ಸಂಚಲನ ಅಧ್ಯಕ್ಷ ಚಿದಾನಂದ್‌ ಹೇಳುವಂತೆ, ಮರದಲ್ಲಿ ನೇತಾಡುತ್ತ ಇದ್ದ ಕೊರೆಗಳ ಕಾಲುಗಳಲ್ಲಿ ಸಣ್ಣ ಸಣ್ಣ ನೂಲಿನ ದಾರಗಳಿಂದ ಸುತ್ತಿಕೊಂಡಿದ್ದವು. ಈ ದಾರಗಳು ಮರದ ಸಣ್ಣ ರಂಬೆ, ಜಾಲಿ, ಬಿದಿರು ಮುಳ್ಳಿಗೆ ಸುತ್ತಿಕೊಂಡಿದ್ದವು. ಈ ದಾರಗಳಿಂದ ಬಿಡಿಸಿಕೊಂಡು ಮೇಲೆ ಹಾರಲು ಸಾಧ್ಯವಾಗದೇ ಸತತ ಪ್ರಯತ್ನದ ನಂತರ ಒದ್ದಾಡಿ ಕೊಕ್ಕರೆಗಳು ಪ್ರಾಣಕಳೆದುಕೊಂಡಿವೆ
ಎಂದರು.

ADVERTISEMENT

ಆಹಾರ ತರಲು ಕೆರೆ ಅಂಗಳಕ್ಕೆ ಹೋಗಿ ತನ್ನದಲ್ಲದ ತಪ್ಪಿಗೆ ದಾರಕ್ಕೆ ಸಿಕ್ಕಿಹಾಕಿಕೊಂಡು ದೊಡ್ಡಕೊಕ್ಕರೆಗಳು ಮೃತಪಡುವುದು ನಮ್ಮ ಕಣ್ಣಿಗೆ ಕಾಣುತ್ತವೆ. ಆದರೆ ಆಹಾರಕ್ಕಾಗಿಯೇ ಕಾದುಕುಳಿತ ಮರಿ ಕೊಕ್ಕರೆಗಳ ನರಳಾಟ, ಸಾವು ಕಲ್ಪನೆಗೂ ಮೀರಿದೆ.

ಕೊಕ್ಕರೆಗಳು ಆಹಾರಕ್ಕಾಗಿ ಕೆರೆಗಳನ್ನೇ ಅವಲಂಭಿಸಿವೆ. ಕೆರೆಯ ನೀರಿನಲ್ಲಿ ಮೀನು ಹಿಡಿಯಲು ನೈಲಾನ್‌ ಬಲೆಗಳನ್ನು ಬಿಟ್ಟಿರುತ್ತಾರೆ. ಆಹಾರ ಹುಡುಕುವ ಆತುರದಲ್ಲಿ ನೀರಿಗೆ ಇಳಿಯುವ ಕೊಕ್ಕರೆಗಳ ಕಾಲಿಗೆ ಬಲೆಯ ದಾರ ಸುತ್ತಿಕೊಳ್ಳುತ್ತವೆ. ಅದು ಹೇಗೋ ಒದ್ದಾಡಿ ಸಾಹಸ ಮಾಡಿ ಅಲ್ಲಿಂದ ಬಿಡಿಸಿಕೊಂಡು ಬರುತ್ತವೆ. ಆದರೆ ಮರದ ಸಣ್ಣ ರಂಬೆಗಳಿಗೆ ಕೊಕ್ಕರೆಗಳ ಕಾಲಿನ ದಾರ ಸುತ್ತಿಹಾಕಿಕೊಂಡಾಗ ಮೇಲೆ ಹಾರಲು ಸಾಧ್ಯವಾಗದೆ ಪ್ರಾಣ ಬಿಡುತ್ತಿವೆ ಎಂದರು.

ನಗರದ ಅಂಚಿನ ಅಥವಾ ಇತರೆ ಕಡೆಗಳಲ್ಲಿನ ಕೆರೆ ಅಂಗಳದಲ್ಲಿ ಪಕ್ಷಿಗಳಿಗೆ ಅಪಾಯ ಆಗುವಂತಹ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾದಡೆ ನಿಗದಿ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಪಕ್ಷಿಗಳು ಅದರಲ್ಲೂ ಕೊಕ್ಕರೆಗಳು ನಿಗದಿತ ಸ್ಥಳದಲ್ಲಿ ವಾಸ ಮಾಡುವ ಮರಗಳ ಸಮೀಪ ಸಂಜೆಯ ನಂತರ ಜನರ ಒಡಾಟವನ್ನು ಕಡಿಮೆ ಮಾಡಬೇಕು. ಮನುಷ್ಯರು ಬಳಸಿದಂತಹ ತ್ಯಾಜ್ಯಗಳನ್ನು ಬಿಸಾಡದಂತೆ ಸ್ಥಳೀಯ ಸಂಸ್ಥೆಗಳ ಆಡಳಿತ ಎಚ್ಚರ ವಹಿಸಬೇಕು. ಅಲ್ಲದೆ ನೇಕಾರಿಕೆ ಉದ್ಯಮವೇ ಮುಖ್ಯವಾಗಿರುವ ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರಿಕೆಯ ನಂತರ ಉಳಿಯುವ ಸಣ್ಣ ಪುಟ್ಟ ನೈಲಾನ್‌, ರೇಷ್ಮೆ ಬೆಟ್ಟೆಯ ತ್ಯಾಜ್ಯ ದಾರಗಳನ್ನು ಕೆರೆ ಅಂಚಿನಲ್ಲಿ ಹಾಕುವುದನ್ನು
ತಪ್ಪಿಸಬೇಕಿದೆ.

ಇವಿಷ್ಟೇ ಅಲ್ಲದೆ ಇನ್ನು ಹಲವಾರು ಸುರಕ್ಷಿತ ಕ್ರಮಗಳ ಬಗ್ಗೆ ಚಿಂತನೆ ನಡೆಸಬೇಕು. ಇದೆಲ್ಲಕ್ಕೂ ಮುಖ್ಯವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ಕೆಲಸ ಸಸಿಗಳನ್ನು ನಾಟಿ ಮಾಡುವುದಷ್ಟೇ ಅಲ್ಲ, ಪ್ರಾಣಿ, ಪಕ್ಷಿಗಳ ರಕ್ಷಣೆ, ಅವುಗಳಿಗೆ ತೊಂದರೆಯಾಗದಂತೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯು ನಿಗಾವಹಿಸಬೇಕಿದೆ ಎನ್ನುತ್ತಾರೆ ಯುವ ಸಂಚಲನ ತಂಡದ ಮುಖಂಡ ದಿವಾಕರ್‌ನಾಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.