ADVERTISEMENT

ಬಚ್ಚೇಗೌಡ ಮೇಲೆ ಕ್ರಮ ಅಸಾಧ್ಯ: ಶರತ್ ಬಚ್ಚೇಗೌಡ

ಶಾಸಕ ಶರತ್‌ ಬಚ್ಚೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 13:44 IST
Last Updated 18 ಡಿಸೆಂಬರ್ 2019, 13:44 IST
ಧರ್ಮಸ್ಥಳ ಹಾಗೂ ಹೊರನಾಡು ಕ್ಷೇತ್ರಕ್ಕೆ ದವಸ ಧಾನ್ಯಗಳ ಹರಕೆ ಸಲ್ಲಿಕೆಗೆ ಹೊರಟ ವಾಹನಗಳಿಗೆ, ಶಾಸಕ ಶರತ್ ಬಚ್ಚೇಗೌಡ ಪೂಜೆ ಸಲ್ಲಿಸಿ ಚಾಲನೆ ನೀಡಿದರು
ಧರ್ಮಸ್ಥಳ ಹಾಗೂ ಹೊರನಾಡು ಕ್ಷೇತ್ರಕ್ಕೆ ದವಸ ಧಾನ್ಯಗಳ ಹರಕೆ ಸಲ್ಲಿಕೆಗೆ ಹೊರಟ ವಾಹನಗಳಿಗೆ, ಶಾಸಕ ಶರತ್ ಬಚ್ಚೇಗೌಡ ಪೂಜೆ ಸಲ್ಲಿಸಿ ಚಾಲನೆ ನೀಡಿದರು   

ಸೂಲಿಬೆಲೆ: ‘ಉಪಚುನಾವಣೆಯಲ್ಲಿ ಸಂಸದ ಬಚ್ಚೇಗೌಡ ಅವರು ನನ್ನ ಪರ ಅಥವಾ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಲಿಲ್ಲ. ಹೀಗಿರುವಾಗ ಅವರ ಮೇಲೆ ಪಕ್ಷ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಅಭಿಮಾನಿಗಳು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಹೊರನಾಡಿಗೆ ತಮ್ಮ ಪರ ಹರಕೆ ಸಲ್ಲಿಸಲು ಸಂಗ್ರಹಿಸಿದ ವಸ್ತುಗಳಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹೊಸಕೋಟೆ ಕ್ಷೇತ್ರದಲ್ಲಿ, ಪಕ್ಷೇತರ ಅಭ್ಯರ್ಥಿ ಹಾಗೂ ಅನರ್ಹ ಶಾಸಕರ ನಡುವೆ ನೇರವಾದ ಸ್ಪರ್ಧೆ ಏರ್ಪಟ್ಟಿತ್ತು.ಮತದಾರರು ಸ್ವಾಭಿಮಾನಕ್ಕೆ ಮನ್ನಣೆ ನೀಡಿ ನನ್ನನ್ನು ಆಯ್ಕೆ ಮಾಡಿದರು. ಹೀಗಾಗಿ ಎಂಟಿಬಿ ಅವರ ಸೋಲಿಗೆ ನಾನೇ ಕಾರಣ. ಬಚ್ಚೇಗೌಡರು ಅಲ್ಲ. ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ಇದರಲ್ಲಿ ಹೊಸದೇತೂ ಇಲ್ಲ ಎಂದು ಹೇಳಿದರು.

ADVERTISEMENT

‘ಒಂದು ವಾರದಿಂದ ತಾಲ್ಲೂಕಿನ ಬಹುತೇಕ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದು, ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡು ಸಾಗುವ ಕಡೆಗೆ ನಮ್ಮ ಚಿತ್ತವಿದೆ. ಇಲ್ಲಿ ಯಾವುದೇ ದ್ವೇಷದ ರಾಜಕಾರಣಕ್ಕೆ ನಾವು ಮುಂದಾಗುವುದಿಲ್ಲ.ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಮುಖ್ಯಮಂತ್ರಿ ಅವರ ಭೇಟಿಗೆ ಸಮಯ ಕೇಳಿದ್ದೇನೆ’ ಎಂದರು.

ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಮಾತನಾಡಿ, ‘ಬೆಂಡಿಗಾನಹಳ್ಳಿ, ತಿಮ್ಮಪ್ಪನಹಳ್ಳಿ ಗ್ರಾಮಸ್ಥರಿಂದ ಸುಮಾರು 10 ಟನ್ ತರಕಾರಿ, 4 ಟನ್ ಅಕ್ಕಿ, 2 ಟನ್ ಬೇಳೆ ಕಾಳುಗಳು ಹಾಗೂ ಸಂಭಾರ ಪದಾರ್ಥಗಳನ್ನು ಸಂಗ್ರಹ ಮಾಡಲಾಗಿದ್ದು, ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಕಳುಹಿಸಿಕೊಡಲಾಗುತ್ತಿದೆ’ ಎಂದರು.

ಯುವ ಮುಖಂಡ ಹಸಿಗಾಳ ಜಗದೀಶ್, ಚಿಕ್ಕಅರಳಗೆರೆ ಮುನಿರಾಜು ಹಾಗೂ ಗುತ್ತಿಗೆದಾರ ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.