ADVERTISEMENT

ಸ್ಯಾನ್‌ಫ್ರಾನ್ಸಿಸ್ಕೊದಿಂದ ಬೆಂಗಳೂರಿಗೆ ಬಂದಿಳಿದ ತಡೆರಹಿತ ವಿಮಾನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 3:20 IST
Last Updated 12 ಜನವರಿ 2021, 3:20 IST
ss
ss   

ದೇವನಹಳ್ಳಿ: ಸ್ಯಾನ್‌ಫ್ರಾನ್ಸಿಸ್ಕೊ(ಎಸ್‌ಎಫ್‌ಒ)ನಿಂದ ಮೊದಲ ವಿಮಾನ 176 ಪ್ರಯಾಣಿಕರನ್ನು ಹೊತ್ತು ಬೆಳಗಿನ ಜಾವ 3ಗಂಟೆ 7 ನಿಮಿಷ ಸಮಯಕ್ಕೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಮೊಟ್ಟ ಮೊದಲಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಪ್ರಾರಂಭವಾಗಿದೆ. ಆರಂಭದಲ್ಲಿ ಈ ವಿಮಾನ ಹಾರಾಟ ವಾರಕ್ಕೆ ಎರಡು ಬಾರಿ ಸಂಚಾರ ನಡೆಸಲಿದೆ.

ಇದು ಏರ್ ಇಂಡಿಯಾದ ಅತ್ಯಂತ ಉದ್ದವಾದ ಮಾರ್ಗವಾಗಿದೆ. ಸುಮಾರು 16 ಗಂಟೆಗಳ ಪ್ರಯಾಣ ಒಳಗೊಂಡಿರುತ್ತದೆ. ಜಗತ್ತಿನಲ್ಲಿ 10 ಅತ್ಯಂತ ದೂರದ ಅಗ್ರಮಾನ್ಯ ಮಾರ್ಗಗಳಲ್ಲಿ ಇದು ಒಂದಾಗಿದೆ ಎಂದು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ನಿರ್ವಹಣಾ ಮಂಡಳಿ ತಿಳಿಸಿದೆ.

ADVERTISEMENT

ಯುಎಸ್‌ ಜತೆಗೆ ಸಂಪರ್ಕ ಪಡೆದುಕೊಂಡ ದಕ್ಷಿಣ ಭಾರತದ ಮೊದಲ ನಗರ ಬೆಂಗಳೂರು. ಈ ತಡೆರಹಿತ ವಿಮಾನ ಹಾರಾಟ ಮಾರ್ಗದ ಆರಂಭ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಗಮನಾರ್ಹ ಮೈಲುಗಲ್ಲಾಗಿದೆ.

ನೂತನ ಮಾರ್ಗದ ಆರಂಭ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿ.ಐ.ಎ.ಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮಾರಾರ್, ಜಗತ್ತಿನಲ್ಲಿ ತಂತ್ರಜ್ಞಾನದ ಶಕ್ತಿಗಳಾಗಿ ಖ್ಯಾತಿ ಹೊಂದಿರುವ ಎರಡು ನಗರಗಳನ್ನು ಸಂಪರ್ಕಿಸುವ ತಡೆರಹಿತ ವಿಮಾನ ಹಾರಾಟ ಮಾರ್ಗ ಇದಾಗಿದೆ ಎಂದು ಅವರು ಹೇಳಿದರು

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇದು ಐತಿಹಾಸಿಕ ದಿನವಾಗಿದೆ. ಗ್ರಾಹಕರ ಬಹುದೀರ್ಘಕಾಲದ ಬೇಡಿಕೆ ಈಡೇರಿದೆ.

ಜನರು ಮತ್ತು‌ಉದ್ಯಮಗಳ ನಡುವೆ ಸಂಪರ್ಕಕ್ಕೆ ಈ ನೂತನ ಮಾರ್ಗ ಮತ್ತಷ್ಟು ಪರಿವರ್ತನೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿ‌ಎಲ್‌ಆರ್-ಎಸ್‌ಎಫ್‌ಒ ಮಾರ್ಗ ಹೆಚ್ಚು ಬೇಡಿಕೆ ಹೊಂದಿದೆ. ಯುಎಸ್‌ನ ಪಶ್ಚಿಮ ಕರಾವಳಿಯಲ್ಲಿರುವ ನಗರಗಳಿಗೆ ಕ್ಷಿಪ್ರ ಮತ್ತು ಸುಲಭವಾದ ಸಂಪರ್ಕಕ್ಕೆ ಅವಕಾಶ ಮಾಡಿ ಕೊಡಲಿದೆ. ಏರ್ ಇಂಡಿಯಾ ಸಂಸ್ಥೆಯು ಸ್ಟಾರ್ ಅಲಯನ್ಸ್ ಸದಸ್ಯರಾಗಿರುವುದರೊಂದಿಗೆ ಮುಂದಿನ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಅನುಕೂಲಕರ ಸಂಪರ್ಕ ಸಾದರಪಡಿಸಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.