ADVERTISEMENT

ಕಸ ವಿಂಗಡನೆಗೆ ಕ್ರಮಕೈಗೊಳ್ಳಲು ಸೂಚನೆ: ಕರೀಗೌಡ

ಚಿಕ್ಕತುಮಕೂರಿನಲ್ಲಿರುವ ನಗರದ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 16:30 IST
Last Updated 31 ಆಗಸ್ಟ್ 2018, 16:30 IST
ನಗರಸಭೆಯ ಕಸವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಕರೀಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು
ನಗರಸಭೆಯ ಕಸವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಕರೀಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ದೊಡ್ಡಬಳ್ಳಾಪುರ: ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸಬೇಕಾಗಿರುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಕಸವನ್ನು ಮೂಲದಲ್ಲಿಯೇ ವಿಂಗಡಿಸುವ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಅಧಿಕಾರಿಗಳಿಗೆ ಸೂಚಿಸಿದರು.

ದೊಡ್ಡಬಳ್ಳಾಪುರ ನಗರಸಭೆ ವಡ್ಡರಪಾಳ್ಯ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಚಿಕ್ಕತುಮಕೂರಿನಲ್ಲಿನ ನಗರಸಭೆ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕಸ ಮೂಲದಲ್ಲಿಯೇ ವಿಂಗಡಿಸುವ ಕಡೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ಸೋಮವಾರದಿಂದ ನಗರಸಭೆ ಪೌರಾಯುಕ್ತರು ಸಾರ್ವಜನಿಕರಿಗೆ ಕಸ ವಿಂಗಡಿಸಲು ಕಟ್ಟುನಿಟ್ಟಾಗಿ ಸೂಚಿಸಲು ಕ್ರಮ ಕೈಗೊಳ್ಳಲಿದ್ದಾರೆ.ಕಸದಿಂದ ರಸ ಎನ್ನುವಂತೆ ಹಸಿ ಕಸ ವಿಂಗಡನೆ ಮಾಡಿದಾಗ ಹಲವು ಉಪಯೋಗಗಳಿವೆ. ಅಂತೆಯೇ ವಿವಿಧ ಬಗೆಯ ಕಸ ವಿಂಗಡನೆ ವೈಜ್ಞಾನಿಕವಾಗಿ ಮಾಡಿದಾಗ ಕಸದಿಂದಲೂ ವಿವಿಧ ಅನುಕೂಲ ಪಡೆಯಬಹುದಾಗಿದೆ ಎಂದರು.

ADVERTISEMENT

ಚಿಕ್ಕತುಮಕೂರಿನಲ್ಲಿರುವ ನಗರದ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಅವರು, ತ್ಯಾಜ್ಯ ನೀರು ಸಂಸ್ಕರಣೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡುವಂತೆ ಸೂಚಿಸಿದರು.

ನಗರದ ಒಳಚರಂಡಿಯಿಂದ ಹೊರಹಾಕಲ್ಪಟ್ಟ ತ್ಯಾಜ್ಯ ನೀರು ಚಿಕ್ಕತುಮಕೂರಿನ ಸಂಸ್ಕರಣಾ ಘಟಕದಿಂದ ಶುದ್ಧೀಕರಿಸದೆ ಕೆರೆಗೆ ಸೇರುತ್ತಿದ್ದು. ಕೆರೆ ಹಾಗೂ ಸುತ್ತಮುತ್ತಲ ವಾತಾವರಣ ಕಲುಷಿತವಾಗುತ್ತಿದೆ ಎಂದು ಸುತ್ತಮುತ್ತಲ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದರು.

ಮಜರಾಹೊಸಹಳ್ಳಿ, ಚಿಕ್ಕತುಮಕೂರು, ತಿಪ್ಪಾಪುರ ಮತ್ತು ವೀರಾಪುರ ಗ್ರಾಮಗಳ ನಡುವೆ ಇರುವ ಕೆರೆಯಲ್ಲಿ ತ್ಯಾಜ್ಯ ನೀರು ಹರಿದು ಬರುತ್ತಿರುವುದರಿಂದ ಕೆರೆ ಕಲುಷಿತಗೊಂಡಿದೆ. ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇದಲ್ಲದೇ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಕೆರೆಗೆ ಸೇರುತ್ತಿದೆ. ವಾಸನೆ ಹೆಚ್ಚಾಗಿದ್ದು ಸುತ್ತಲಿನ ಗ್ರಾಮಸ್ಥರು ಡೆಂಗಿ, ಚಿಕುನ್ ಗುನ್ಯಾ ರೋಗಗಳಿಂದ ನರಳುವಂತಾಗಿದೆ. ಕೆರೆಯ ಕಲುಷಿತ ನೀರು ಕುಡಿದು ಜಾನುವಾರುಗಳು ಮೃತಪಟ್ಟಿವೆ. ಈ ಭಾಗದಲ್ಲಿನ ಬಾವಿ ನೀರು ಕುಡಿಯಲು ಯೋಗ್ಯ ಇಲ್ಲದಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕರೀಗೌಡ ಈ ಕುರಿತು ಪ್ರತಿಕ್ರಿಯಿಸಿ, ಚಿಕ್ಕತುಮಕೂರಿನ ಸಂಸ್ಕರಣಾ ಘಟಕ ವೈಜ್ಞಾನಿಕವಾಗಿ ರೂಪಿಸಿರುವುದು ಕಂಡು ಬಂದಿದೆ. ಗ್ರಾಮಸ್ಥರು ನೀಡಿರುವ ದೂರು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಆರ್. ಮಂಜುನಾಥ್, ಕಾರ್ಯಪಾಲಕ ಎಂಜಿನಿಯರ್ ಶೇಕ್ ಫಿರೋಜ್, ಪರಿಸರ ಎಂಜಿನಿಯರ್ ಈರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.