ಹೊಸಕೋಟೆ: ಜಿಲ್ಲೆಯ ಯಾವುದೇ ಪಂಚಾಯಿತಿಯಲ್ಲಿ ಪತ್ನಿಯ ಹೆಸರಲ್ಲಿ ಪತಿ ಅಧಿಕಾರ ಚಲಾಯಿಸುತ್ತಿರುವುದು ಕಂಡಲ್ಲಿ ಕಠಿಣ ಕ್ರಮ ಕೈಗೊಳ್ಳಿ ಎಂದು ಉಪಲೋಕಾಯುಕ್ತ ನ್ಯಾಯಾಮೂರ್ತಿ ಬಿ. ವೀರಪ್ಪ ಜಿ.ಪಂ ಸಿಇಒಗೆ ಸೂಚಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಹೊಸಕೋಟೆ ತಾಲ್ಲೂಕಿನ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿಯ ಮಹಿಳಾ ಅಧ್ಯಕ್ಷರ ಸ್ಥಾನದಲ್ಲಿ ಅವರ ಪತಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಗ್ರಾಮ ಪಂಚಯಿತಿಯ ಮಹಿಳಾ ಅಧ್ಯಕ್ಷೇ. ಇವರ ಹೆಸರು ಪತಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇಂತಹವರ ಜೊತೆಗೆ ಪಿಡಿಒ ಕೂಡ ಬೋರವೆಲ್ ರಿಪೇರಿ, ನರೇಗಾ ಯೋಜನೆ, ರಸ್ತೆ ದುರಸ್ತಿ, ಬೀದಿ ದೀಪ ಹೀಗೆ ಇತ್ಯಾದಿ ಯೋಜನೆ ಮತ್ತು ಕಾಮಗಾರಿ ಎಂದು ಅಕ್ರಮ ಬಿಲ್ಲು ಮಾಡಿ, ಲಕ್ಷಾಂತರ ಹಣ ದೋಚುತ್ತಿದ್ದಾರೆ ಎಂದು ಸಿಡಿಮಿಡಿಗೊಂಡರು.
ಪಂಚಾಯಯತ್ ರಾಜ್ ಮುಖ್ಯ ಉದ್ದೇಶ ಗ್ರಾಮ ಸ್ವರಾಜ್ ನಿರ್ಮಿಸುವುದು. ಆದರೆ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ವಾರ್ಷಿಕ ₹1 ರಿಂದ ₹1.15 ಕೋಟಿ ಸರ್ಕಾರದಿಂದ ಸಿಗುತ್ತದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ ಎಂದರು.
‘ಭ್ರಷ್ಟಾಚಾರ ಸಮಾಜದ ಅತೀ ದೊಡ್ಡ ಪಿಡುಗು. ಅದನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ. ಆ ಕೆಲಸ ಲೋಕಾಯುಕ್ತ ಸಂಸ್ಥೆಯಿಂದ ಆಗುತ್ತಿದೆ. ಆದ್ದರಿಂದಲೇ ಸೆಕ್ಷನ್ 13ರಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ನಾವೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಳ್ಳಬಹುದು. ಇದರಿಂದ ಅಪರಾದ ಸಾಬೀತಾದರೆ ಅವರಿಗೆ ಕನಿಷ್ಠ 3 ವರ್ಷ ಶಿಕ್ಷೆ ಮತ್ತು ₹5 ಸಾವಿರ ದಂಡ ವಿಧಿಸಲಾಗುವುದು. ಅದೇ ರೀತಿ ಸೆಕ್ಷನ್ 17, 17A ಸುಳ್ಳು ಪ್ರಕರಣ ದಾಖಲು ಮಾಡುವುದು ಮತ್ತು ಕೆಲಸ ಮಾಡಲು ಅರ್ಹತೆ ಹೊಂದಿಲ್ಲ ಎಂದು ಪ್ರಕರಣ ದಾಖಲಿಸಬಹುದು. ಆದ್ದರಿಂದ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿದರೆ ಸಮಾಜಕ್ಕೆ ಮತ್ತು ನಿಮಗೂ ಒಳ್ಳೆದು’ ಎಂದು ಎಚ್ಚರಿಕೆ ನೀಡಿದರು.
ಸಂವಿಧಾನದ ನಾಲ್ಕು ಅಂಗಗಳು ದುರ್ಬಲವಾಗಿವೆ. ಕೇಂದ್ರದಲ್ಲಿ ಲೋಕಪಾಲ್ ಮತ್ತು ರಾಜ್ಯದಲ್ಲಿ ಲೋಕಾಯುಕ್ತವು ಸ್ವಾಯತ್ತತೆಯಿಂದ ಕೆಲಸ ಮಾಡುತ್ತಿವೆ ಎಂಬುದಕ್ಕೆ ಅಧಿಕಾರದಲ್ಲಿದ್ದ ಆಡಳಿತ ಪಕ್ಷದ ಸಚಿವರು, ಮುಖ್ಯಮಂತ್ರಿಯನ್ನೆ ಜೈಲಿಗೆ ಕಳುಹಿಸಿರುವ ಉದಾಹರಣೆ ನಮ್ಮ ರಾಜ್ಯದಲ್ಲೇ ಇದೆ. ಹಾಗಾಗಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯು ನಿಷ್ಠೆಯಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್ ಅನುರಾಧ, ಎಎಸ್ಪಿ ನಾಗರಾಜ್, ಲೋಕಾಯುಕ್ತ ವಿಚಾರಣೆ-1 ಉಪ ನಿಬಂಧಕರಾದ ಎನ್.ವಿ. ಅರವಿಂದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲ್ ಭೀಮಸೇನ ಬಗಾಡಿ, ಲೋಕಾಯುಕ್ತ ಡಿವೈಎಸ್ಪಿ ಗಿರೀಶ್ ಉಪಸ್ಥಿತರಿದ್ದರು.
25 ಸಾವಿರ ಪ್ರಕರಣ ಬಾಕಿ
‘ಪ್ರಸ್ತುತ ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 25 ಸಾವಿರ ಪ್ರಕರಣ ಬಾಕಿ ಇದೆ. ಅದನ್ನು ವಿಲೇವಾರಿ ಮಾಡಲು ಬೆಳಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡುತ್ತಿದ್ದೇವೆ. ನನ್ನ ದೇಹಕ್ಕೆ ವಯಸ್ಸಾಗಿದೆ. ಆದರೆ ನನ್ನ ದೃಢ ಸಂಕಲ್ಪಕ್ಕೆ ವಯಸ್ಸಾಗಿಲ್ಲ. ಲೋಕಾಯುಕ್ತ ಸಂಸ್ಥೆಯು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ನೀಡಲು ಸದಾ ಸಿದ್ಧವಿದೆ’ ಎಂದು ನ್ಯಾಯಾಮೂರ್ತಿ ಬಿ. ವೀರಪ್ಪ ತಿಳಿಸಿದರು. ಹೆಚ್ಚಿದ ಅಕ್ಷರಸ್ಥರು–ಕುಗ್ಗಿದ ದೇಶದ ಕಾಳಜಿ: ಸ್ವಾತಂತ್ರ ಪೂರ್ವದಲ್ಲಿ ದೇಶದಲ್ಲಿ ಕೇವಲ ಶೇ 15 ರಷ್ಟು ಅಕ್ಷರಸ್ಥರು ಇದ್ದಾಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವಲ್ಲಿ ತಾಮುಂದು; ನಾಮುಂದು ಎನ್ನುವಂತಹ ದೇಶಭಕ್ತಿ ಇತ್ತು. ಆದರೆ ಇಂದು ದೇಶದಲ್ಲಿ ಶೇ 95 ರಷ್ಟು ಅಕ್ಷರಸ್ಥರಿದ್ದರೂ ದೇಶದ ಬಗ್ಗೆ ಜನರಲ್ಲಿ ಕಿಂಚಿತ್ತು ಕಾಳಜಿ ಇಲ್ಲ ಎಂದು ಬೇಸರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.