
ಕೆಂಪರಾಜಯ್ಯ
ದೇವನಹಳ್ಳಿ: ಚನ್ನರಾಯಪಟ್ಟಣ ಹೋಬಳಿಯ ಬೆಟ್ಟಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಯಸಂದ್ರದಲ್ಲಿ ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಪಾವತಿಸಿರುವ ಆರೋಪದ ಮೇಲೆ ಬೆಟ್ಟಕೋಟೆ ಗ್ರಾ.ಪಂ ಪಿಡಿಒ ಕೆಂಪರಾಜಯ್ಯ ಅವರನ್ನು ಗುರುವಾರ ಅಮಾನತು ಮಾಡಲಾಗಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಂಪರಾಜಯ್ಯ ಮತ್ತು ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮೇಲಧಿಕಾರಿಗಳು, ಇಲಾಖಾ ವಿಚಾರಣೆ ಕಾಯ್ದಿರಿಸಿ ಕೆಂಪರಾಜಯ್ಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ರಾಯಸಂದ್ರ ಗ್ರಾಮದ ಮುನಿಕೃಷ್ಣಪ್ಪ ತೋಟದಿಂದ ಮುನಿರಾಜು ತೋಟದವರೆಗೂ ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಅನುದಾನದಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ರಸ್ತೆ ಕಾಮಗಾರಿ ಕೈಗೊಂಡಿತ್ತು.
ನಿರ್ಮಿತಿ ಕೇಂದ್ರ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡಿರುವ ಪತ್ರಕ್ಕೂ ಸಹಿ ಮಾಡಿ, ಸಿಸಿ ರಸ್ತೆಯನ್ನು ಗ್ರಾಮ ಪಂಚಾಯಿತಿಯ ನಿರ್ವಹಣೆಗೆ ಪಡೆದುಕೊಂಡಿದ್ದರು. ಆದರೆ ಕೆಲ ದಿನಗಳ ನಂತರ ಇದೇ ಕಾಮಗಾರಿಯ ಪೋಟೊ ಬಳಸಿಕೊಂಡು ಬೆಟ್ಟಕೋಟೆ ಗ್ರಾ.ಪಂ ಸ್ವಂತ ಸಂಪನ್ಮೂಲ ನಿಧಿ ಅಡಿ ₹4.99 ಲಕ್ಷ ಅಂದಾಜು ಮೊತ್ತವನ್ನು ಗ್ರಾಮ ಪಂಚಾಯಿತಿಯಿಂದ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಬಿಲ್ ಪಾವತಿ ಮಾಡಿದ್ದರು.
ಮಾಹಿತಿ ಹಕ್ಕು ಕಾನೂನು ಅಡಿ ಪಡೆದ ಮಾಹಿತಿಯಲ್ಲಿ ಈ ಅಕ್ರಮ ಬಯಲಾಗಿತ್ತು. ದಲಿತ ಸಂಘಟನೆಗಳು ಇದರ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಪ್ರಾಥಮಿಕ ತನಿಖೆ ಆಧಾರದಲ್ಲಿ ಪಿಡಿಒ ಕೆಂಪರಾಜಯ್ಯ ಅವರನ್ನು ಅಮಾನತು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.