ADVERTISEMENT

ದೇವನಹಳ್ಳಿ ಮತ್ತೆ 11 ಜನರಲ್ಲಿ ಸೋಂಕು

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 17:08 IST
Last Updated 4 ಜೂನ್ 2020, 17:08 IST
ವಿದ್ಯಾರ್ಥಿನಿಲಯ ಪಕ್ಕದಲ್ಲಿ ಶಂಕಿತ ಸೋಂಕಿತರು ಬಳಸಿರಬಹುದಾದ ತ್ಯಾಜ್ಯಗಳು.
ವಿದ್ಯಾರ್ಥಿನಿಲಯ ಪಕ್ಕದಲ್ಲಿ ಶಂಕಿತ ಸೋಂಕಿತರು ಬಳಸಿರಬಹುದಾದ ತ್ಯಾಜ್ಯಗಳು.   

ದೇವನಹಳ್ಳಿ: ಕಳೆದ ಎರಡು ದಿನಗಳಿಂದ ಇಲ್ಲಿನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದ 89 ಜನರ ಪೈಕಿ 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ತಿಳಿಸಿದರು.

ಸೋಂಕಿತರನ್ನು ಬುಧವಾರ ಸಂಜೆ ಬೆಂಗಳೂರಿನ ಕೋವಿಡ್ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ. ವಿದ್ಯಾರ್ಥಿ ನಿಲಯವನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ. ಕ್ವಾರೆಂಟೈನ್ ವಾಸಿಗಳು ಹೊರ ಬರದಂತೆ ಬಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದರು.

ಸ್ಥಳೀಯರಲ್ಲಿ ನಡುಕ: ‘ಕಳೆದ ವಾರ ನಾಲ್ವರು ಸೋಂಕಿತರು ಧೃಡಪಟ್ಟ ಮತ್ತೆ 11 ಜನರಲ್ಲಿ ಸೋಂಕು ದೃಢಪಟ್ಟಿರುವ ಕಾರಣ ಈ ಸುದ್ದಿ ಸ್ಥಳೀಯರಲ್ಲಿ ನಡುಕ ಹುಟ್ಟಿಸಿದೆ. ಟಿಪ್ಪು ವೃತ್ತ, ಪ್ರಸನ್ನಹಳ್ಳಿ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ನಗರದ ಹೃದಯ ಭಾಗದಲ್ಲಿರುವ ವಿದ್ಯಾರ್ಥಿನಿಲಯದಲ್ಲಿ ಬೇರೆ ರಾಜ್ಯದವರನ್ನು ಕ್ವಾರಂಟೈನ್‌‌ಗೆ ಒಳಪಡಿಸಿ ನಗರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಲಾಗುತ್ತಿದೆ. ವಿದ್ಯಾರ್ಥಿನಿಲಯದಲ್ಲಿ ಈ ಹಿಂದೆ ಕ್ವಾರಂಟೈನ್‌ಗೆ ಒಳಗಾಗಿದ್ದವರ ಪೈಕಿ ನಾಲ್ವರಿಗೆ ಸೋಂಕು ದೃಢಪಟ್ಟಿತ್ತು. ಮತ್ತೆ 11 ಜನರಿಗೆ ಸೋಂಕು ದೃಢಪಟ್ಟಿದೆ.

ADVERTISEMENT

ಸೋಂಕಿತರು ಮತ್ತು ಸೋಂಕಿತರಲ್ಲದವರು ಕ್ವಾರಂಟೈನ್‌ ಸಂದರ್ಭದಲ್ಲಿ ಬಳಕೆ ಮಾಡಿರುವ ಮಾಸ್ಕ್, ಚಪ್ಪಲಿ, ನೀರಿನ ಬಾಟಲ್, ಮದ್ಯದ ಬಾಟಲ್, ಕರವಸ್ತ್ರ ಹಾಗೂ ಇತರ ವಸ್ತುಗಳನ್ನು ಕೃಷಿ ಭೂಮಿ ಪಕ್ಕದಲ್ಲಿ ರಾಶಿ ಹಾಕಲಾಗಿದೆ. ಈ ಸ್ಥಳದ ಪಕ್ಕದಲ್ಲೆ ಹತ್ತಾರು ಕುಟುಂಬಗಳಿದ್ದು ಚಿಕ್ಕಮಕ್ಕಳು, ವಯೋವೃದ್ಧರಿದ್ದಾರೆ. ತೆರವುಗೊಳಿಸುವ ಕೆಲಸ ಮಾಡಲೇಬೇಕಾದ ಜವಾಬ್ದಾರಿ ಹೊತ್ತ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಸ್ಥಳೀಯ ನಿವಾಸಿ ಆರ್. ಸಂತಾನಪ್ಪ ಆರೋಪಿಸಿದರು.

‘ತೋಟದಲ್ಲೆ ಮನೆ ಇದೆ. ಸ್ವಲ್ಪ ದೂರದಲ್ಲಿ ಹಾಸ್ಟೆಲ್‌‌ ಇದೆ. ಹಾಸ್ಟಲ್‌ಗೆ ಎರಡು ಮುಖ್ಯ ದ್ವಾರಗಳಿವೆ. ಕೈಗೆ ಮುದ್ರೆ ಹಾಕಿಸಿಕೊಂಡು ನೇರವಾಗಿ ಪ್ರಸನ್ನಹಳ್ಳಿ ಬಡಾವಣೆಗಳಿಗೆ ಬಂದು ಮದ್ಯ ಇತರ ವಸ್ತುಗಳನ್ನು ಖರೀದಿಸಿಕೊಂಡು ಹೋಗುತ್ತಾರೆ ಎಂದರೆ ಎಷ್ಟರ ಮಟ್ಟಿಗೆ ಇವರಿಗೆ ಭದ್ರತೆ ಇದೆ ಎಂಬುದು ಅರ್ಥವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಗರದ ಹೊರವಲಯದಲ್ಲಿರುವ ಕಾಲೇಜು, ಸರ್ಕಾರಿ ವಸತಿ ಶಾಲೆ, ಸರ್ಕಾರಿ ಕಟ್ಟಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಿ. ಯಾರೂ ಕೇಳುವುದಿಲ್ಲ. ನಗರದಲ್ಲೇ ಸೋಂಕಿತರು ದೃಢಪಟ್ಟರೆ ಸೋಂಕು ನಿಯಂತ್ರಣ ಕಷ್ಟವಾಗಲಿದೆ. ತಾಲ್ಲೂಕು ಮತ್ತು ಜಿಲ್ಲಾಡಳಿತ ಇದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು’ ಎಂದು ಆರ್.ಕೃಷ್ಣಪ್ಪ ಒತ್ತಾಯಿಸಿದರು.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ನಗರದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈ‌ನ್‌ಗೆ ಒಳಗಾದವರಲ್ಲಿ ಈವರೆಗೆ 15 ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರು ಸ್ಥಳೀಯರಲ್ಲ. ಸೋಂಕು ನಗರದವಾಸಿಗಳಿಗೆ ಪ್ರವೇಶ ಮಾಡದಂತೆ ತಡೆಯಲು ಕ್ವಾರಂಟೈನ್‌‌ ಇರುವ ಸ್ಥಳ ಬೇರೆಡೆಗೆ ಸ್ಥಳಾಂತರ ಮಾಡಲೇಬೇಕು ಎಂದು ಒತ್ತಾಯ ಮಾಡುವ ಕಾಳಜಿ ಜನಪ್ರತಿನಿಧಿಗಳಿಗೆ ಇಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.