ADVERTISEMENT

ಬಿಸಿಲಿನಲ್ಲಿ ಸಾಲುಗಟ್ಟಿ ನಿಂತ ಜನರು

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಪಡಿತರ ಪಡೆಯಲು ಜನರಿಗೆ ಎದುರಾದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:43 IST
Last Updated 7 ಏಪ್ರಿಲ್ 2020, 13:43 IST
ವೃದ್ಧಾಪ್ಯ  ವೇತನ ಪಡೆಯಲು ಅಂಚೆ ಕಚೇರಿ ಮುಂದೆ ಮಂಗಳವಾರ ಸಾಲುಗಟ್ಟಿ ನಿಂತಿರುವ ಜನ
ವೃದ್ಧಾಪ್ಯ  ವೇತನ ಪಡೆಯಲು ಅಂಚೆ ಕಚೇರಿ ಮುಂದೆ ಮಂಗಳವಾರ ಸಾಲುಗಟ್ಟಿ ನಿಂತಿರುವ ಜನ   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಪಡಿತರ ವಿತರಣೆ, ಬ್ಯಾಂಕಿಂಗ್ ಹಾಗೂ ಅಂಚೆ ಕಚೇರಿಗಳಲ್ಲಿ ಅಗತ್ಯ ಸೇವೆ ಪಡೆಯಲು ಜನ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಆದರೆ, ಈ ಯಾವುದೇ ಸ್ಥಳದಲ್ಲೂ ದೈಹಿಕ ಅಂತರ ಕಾಪಾಡಿಕೊಳ್ಳುವ ನಿಯಮ ಇರುವುದರಿಂದ ಬಿಸಿಲಿನಲ್ಲಿ ವಯೋವೃದ್ಧರು ನಿಲ್ಲಬೇಕಾಗಿದೆ.

ನಗರದ ಅಂಚೆ ಕಚೇರಿಯಲ್ಲಿ ಮಾಸಾಶನ ಪಡೆಯಲು ವಯೋವೃದ್ಧರು, ಮಹಿಳೆಯರು ಸಾಲುಗಟ್ಟಿ ನಿಲ್ಲುವಂತಾಗಿದೆ.ಇನ್ನು ಹಲವು ಬ್ಯಾಂಕ್‌ಗಳಲ್ಲಿಯೂ ಜನರು ಬ್ಯಾಂಕ್ ಹೊರಗಡೆಯೇ ನಿಲ್ಲಬೇಕಾಗಿದೆ.

ಪಡಿತರ ಧಾನ್ಯ ಕಡಿಮೆ: ಸರ್ಕಾರ ಏಪ್ರಿಲ್ ಮತ್ತು ಮೇ 2ತಿಂಗಳ ಪಡಿತರವನ್ನು ಒಮ್ಮೆಗೇ ನೀಡುತ್ತಿರುವುದು ಪಡಿತರದಾರರಿಗೆ ಸಂತಸ ತಂದಿದೆಯಾದರೂ, ಈ ಹಿಂದೆ ಯೂನಿಟ್‌ಗೆ 7ಕೆ.ಜಿ ನೀಡುತ್ತಿದ್ದ ಅಕ್ಕಿಯನ್ನು ಈಗ 5 ಕೆ.ಜಿ.ಗೆ ಇಳಿಸಲಾಗಿದೆ. ಗೋಧಿ ಪ್ರತಿ ಕಾರ್ಡ್‌ಗೆ 2 ಕೆ.ಜಿ ನೀಡಲಾಗುತ್ತಿದೆ. ಅಂದರೆ 2 ತಿಂಗಳಿಂದ ಬರೀ 3 ಕೆ.ಜಿ ಅಕ್ಕಿ ಮಾತ್ರ ಹೆಚ್ಚುವರಿಯಾಗಿ ಸಿಗಲಿದೆ. ಸರ್ಕಾರ ಒಂದು ಕೈಲಿ ನೀಡಿ ಇನ್ನೊಂದು ಕೈಲಿ ಕಿತ್ತುಕೊಳ್ಳುತ್ತಿದೆ ಎಂದು ಪಡಿತರದಾರ ನಾರಾಯಣಪ್ಪ ದೂರಿದರು.

ADVERTISEMENT

ಟೋಕನ್ ನೀಡಿ ಇಂತಹ ಸಮಯಕ್ಕೆ ಬನ್ನಿ ಎಂದರೂ ಜನ ಅಂಗಡಿ‌ ಮುಂದೆ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಒಬ್ಬರ ಪಡಿತರವನ್ನು ಬೇರೆಯವರಿಗೆ ನೀಡಲು ಸಾಧ್ಯವೇ ಇಲ್ಲ. ನಮ್ಮಲ್ಲಿ ಎಷ್ಟು ಜನ ಪಡಿತರದಾರರು ಇದ್ದಾರೋ ಅಷ್ಟೂ ಜನರಿಗೆ ತಕ್ಕಂತೆಯೇ ಆಹಾರ ಧಾನ್ಯ ಸರಬರಾಜು ಆಗಿರುತ್ತದೆ. ನಾವು ಕಾರ್ಡ್‌ದಾರರಿಗೆ ನೀಡಲೇಬೇಕು. ಇಲ್ಲವಾದರೆ ಸರ್ಕಾರಕ್ಕೆ ಹಿಂದಿರುಗಿಸಬೇಕು ಇದು ನಿಯಮ. ಇದಲ್ಲದೆ ಸರ್ಕಾರ 50ಜನರಿಗೆ ಮಾತ್ರ ಟೋಕನ್ ನೀಡಿ ಅವರಿಗೆ ಮಾತ್ರ ಪಡಿತರ ವಿತರಿಸಲು ಹೇಳಿದೆ. ಆದರೆ, ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಮಾತ್ರ ಊಟದ ಸಮಯ ಹೊರತುಪಡಿಸಿ 100 ಜನಕ್ಕೆ ವಿತರಣೆ ಮಾಡುತ್ತಿದ್ದೇವೆ. ಎಲ್ಲರಿಗೂ ರೇಷನ್ ಸಿಗಲಿದ್ದು, ಮುಗಿಬೀಳುವ ಅವಶ್ಯ ಇಲ್ಲ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿ ಶಿವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.