ADVERTISEMENT

ದೇವನಹಳ್ಳಿ | ವಿಚಿತ್ರ ಕೀಟ ಬಾಧೆಯಿಂದ ಸಸ್ಯ, ಮರಗಳಿಗೆ ಹಾನಿ

ಗಾತ್ರದಲ್ಲಿ ದಪ್ಪ, ವಿವಿಧ ಮಾದರಿಯ ಚುಕ್ಕಿಭರಿತ ಬಣ್ಣ ಹಾಗೂ ಹಸಿರೆಲೆ ಬಣ್ಣದಂತಿರುವ ಕೀಟ ಗುಂಪು

ವಡ್ಡನಹಳ್ಳಿ ಬೊಜ್ಯನಾಯ್ಕ
Published 4 ಡಿಸೆಂಬರ್ 2019, 9:43 IST
Last Updated 4 ಡಿಸೆಂಬರ್ 2019, 9:43 IST
ಎಲೆ ತಿನ್ನುವ ಕೀಟ
ಎಲೆ ತಿನ್ನುವ ಕೀಟ   

ದೇವನಹಳ್ಳಿ: ಹಲವಾರು ವರ್ಷಗಳಿಂದ ಪರಿಸರ ಸಂರಕ್ಷಣೆಗಾಗಿ ನೆಟ್ಟು ಬೆಳೆಸಲಾದ ವಿವಿಧ ಜಾತಿಯ ಗಿಡಮರಗಳು ವಿಚಿತ್ರ ವಿಷಕಾರಿ ಕೀಟಗಳ ಬಾಧೆಗೆ ಮರದ ತೊಗಟೆ ಮತ್ತು ಎಲೆಗಳನ್ನು ಅಪೋಶನಮಾಡುತ್ತಿದ್ದು ಒಣಗಿದ ಮರಗಳೆಂಬಂತೆ ಬರಡಾಗುತ್ತಿವೆ.

ವಾರ್ಷಿಕ ಕೃಷಿಚಟುವಟಿಕೆಗಳ ಸಂದರ್ಭದಲ್ಲಿ ಕಂಬಳಿ ಹುಳುಗಳ ಬಾಧೆ ಸಾಮಾನ್ಯ. ಈ ಮರಗಳಲ್ಲಿ ಕಂಬಳಿ ಹುಳುಗಳನ್ನು ಮೀರಿಸಿ ಗಾತ್ರದಲ್ಲಿ ದಪ್ಪ ಮತ್ತು ವಿವಿಧ ಮಾದರಿಯ ಚುಕ್ಕಿಭರಿತ ಬಣ್ಣ ಹಾಗೂ ಹಸಿರೆಲೆ ಬಣ್ಣದಂತಿರುವ ಒಂದು ಕೀಟದ ಗುಂಪು ಮರದ ಎಲೆಗಳು ಮತ್ತು ಚಿಗುರನ್ನು ಕೆಲವೇ ನಿಮಿಷದಲ್ಲಿ ತಿಂದುಹಾಕುತ್ತವೆ. ಮತ್ತೊಂದು ಜಾತಿಯ ಕೀಟ ಮರದ ತೊಗಟೆಯ ತದ್ರೂಪಿ ಎಂಬಂತಿದ್ದು ಮರದ ಕಾಂಡವನ್ನು ಕೊರೆದು ರಸ ಹೀರುತ್ತಿವೆ. ಇಂತಹ ಅಪರೂಪದ ವಿಚಿತ್ರ ಕೀಟಗಳು ಮನುಷ್ಯನ ಚರ್ಮಕ್ಕೆ ತಾಕಿದರೂ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಜಿ.ವೆಂಕಟೇಶ್.

ಎಲ್ಲೆಡೆ ಪರಿಸರ ರಕ್ಷಣೆಯ ಅರಿವು ಮೂಡಿಸಿ ಸರ್ಕಾರಿ ಶಾಲಾ ಅಂಗಳ, ಸರ್ಕಾರಿ ಖಾಲಿ ಜಾಗ, ಗುಂಡು ತೋಪು, ಖರಾಬು, ಕೆರೆಯಂಗಳ ಮತ್ತು ಕೆರೆ ಅಕ್ಕಪಕ್ಕ, ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ, ಪುರಸಭೆ, ಅರಣ್ಯ ಇಲಾಖೆ, ಪ್ರಗತಿಪರ ಸಂಘಟನೆಗಳು ಮತ್ತು ಭಾರತ ಸೇವಾದಳದ ವತಿಯಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಕಳೆದ ಆರೇಳು ವರ್ಷಗಳಿಂದ ಅವುಗಳಿಗೆ ರಕ್ಷಣೆ ನೀಡಿ ಬೇಸಗೆಯಲ್ಲಿಯೂ ನೀರುಣಿಸಿ ಬೆಳೆಸುತ್ತಿರುವ ಗಿಡಮರಗಳಿಗೆ ವಿಚಿತ್ರ ಕೀಟಬಾಧೆಗೆ ಒಳಗಾಗಿರುವುದು ನೋವು ತರಿಸಿದೆ. ನನ್ನ 80 ವರ್ಷಗಳ ಜೀವನದಲ್ಲಿ ಇಂತಹ ಅಪಾಯಕಾರಿ ಕೀಟಗಳನ್ನು ನೋಡಿಯೇ ಇಲ್ಲ, ಕೀಟಗಳ ಬಾಧೆ ಇದೇ ರೀತಿ ಮುಂದುವರೆದರೆ ಇಡಿ ತಾಲ್ಲೂಕಿನಲ್ಲಿರುವ ಹಸಿರು ಪರಿಸರವನ್ನು ಸರ್ವನಾಶಮಾಡಲಿದೆ. ತಡೆಗಟ್ಟಲು ಪುರಸಭೆ ಅಧಿಕಾರಿಗಳು, ಅರಣ್ಯ ಇಲಾಖೆ ಮುಂದಾಗಬೇಕು ಎಂಬುದು ನಮ್ಮ ಒತ್ತಾಯ ಎನ್ನುತ್ತಾರೆ ತಾಲ್ಲೂಕು ಭಾರತಸೇವಾದಳ ಘಟಕ ಗೌರವಾಧ್ಯಕ್ಷ ಎಸ್.ಲಕ್ಷ್ಮೀನಾರಾಯಣಪ್ಪ.

ADVERTISEMENT

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಈಗಾಗಲೇ ನೂರಾರು ಎಕರೆ ಅರಣ್ಯ ಪ್ರದೇಶ ಅಪೋಶನವಾಗಿದೆ. ಅರಣ್ಯ ಅಭಿವೃದ್ಧಿಪಡಿಸಿ ಸಂರಕ್ಷಿಸಿ ವಿಸ್ತೀರ್ಣ ಹೆಚ್ಚಿಸಿಕೊಳ್ಳಲು ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಮತ್ತು ದಾನಿಗಳ ನೆರವಿನಿಂದ ಸಸಿ ನೆಟ್ಟು ಚಿಕ್ಕ ಮಕ್ಕಳಂತೆ ಪಾಲನೆ ಮಾಡಿದ ಪರಿಣಾಮ ಮರವಾಗಿ ಬೆಳೆಯುತ್ತಿವೆ ಎಂದು ಕೃಷಿಕ ಸಮಾಜ ಜಿಲ್ಲಾ ಘಟಕ ಅಧ್ಯಕ್ಷ ಆರ್. ರವಿಕುಮಾರ್ ಹೇಳಿದರು.

ಕೀಟಗಳ ಬಾಧೆಯಿಂದ ಒಣಗಿದಂತೆ ಕಾಣುತ್ತಿರುವ ಮರಗಳನ್ನು ನೋಡಿದರೆ ಮರುಕವಾಗುತ್ತದೆ, ವಾಯುವಿಹಾರಿಗಳಿಗೆ ಇಲ್ಲಿನ ಪರಿಸರ ಸೂಕ್ತವಾಗಿದೆ, ಸಂಬಂಧಪಟ್ಟ ಇಲಾಖೆ ಕೀಟಬಾಧೆಗೆ ಆರಂಭದಲ್ಲೆ ಕ್ರಿಮಿನಾಶಕ ಸಿಂಪರಣೆ ಮಾಡಿ ಹತೋಟಿಗೆ ತರಬೇಕು ಇಲ್ಲದಿದ್ದರೆ ಕಷ್ಟಪಟ್ಟು ಬೆಳೆಸಿದ ಮರಗಳು ಸರ್ವನಾಶವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪರಿಹಾರಕ್ಕೆ ಕ್ರಮ
ದೇವನಹಳ್ಳಿ ಉಪವಲಯ ಅರಣ್ಯಾಧಿಕಾರಿ ಧನಲಕ್ಷ್ಮಿ ಮಾತನಾಡಿ, ‘ಮರಗಳಿಗೆ ಕೀಟಗಳು ಲಗ್ಗೆ ಇಟ್ಟಿರುವ ಬಗ್ಗೆ ಮಾಹಿತಿ ಇಲ್ಲ. ಮರಗಳು ಮನುಷ್ಯರಂತೆ ಜೀವಿರುವ ವನಸಂಪತ್ತು ಅದನ್ನು ಉಳಿಸುವುದು ಅರಣ್ಯ ಇಲಾಖೆ ಕರ್ತವ್ಯ, ಶೀಘ್ರದಲ್ಲಿ ಪರಿಶೀಲಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವ ಪ್ರಭೇದದ ಕೀಟ, ಅದರ ಮೂಲ ರೂಪಾಂತರ ಯಾವುದು, ಸಂತಾನದ ಬಗೆ ಹೇಗೆ ಎಂದು ಸಮಗ್ರ ಮಾಹಿತಿ ಪಡೆದು ಕೀಟಗಳ ನಾಶಕ್ಕೆ ಅಗತ್ಯ ಔಷದೋಪಚಾರಗಳನ್ನು ಮಾಡಿ ಕಡಿವಾಣ ಹಾಕಲಾಗುವುದು. ಪರಿಸರ ಪ್ರೇಮಿಗಳು ಆತಂಕಪಡುವ ಅಗತ್ಯವಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಕೀಟಗಳ ಬಾಧೆಯಿಂದ ಹಸಿರೆಲೆಯ ಮರ ಬೋಳಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.