ADVERTISEMENT

ವಿಜಯಪುರ ಠಾಣೆ ಪಿಎಸ್‌ಐ ವರ್ಗಾವಣೆ

ಅಪಹರಣಕಾರರಿಗೆ ಸಹಕಾರ: ಕಾನ್‌ಸ್ಟೆಬಲ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 7:28 IST
Last Updated 26 ಜೂನ್ 2022, 7:28 IST
ಈರಮ್ಮ
ಈರಮ್ಮ   

ವಿಜಯಪುರ:ಪಟ್ಟಣದ ಪೊಲೀಸ್ ಠಾಣೆಗೆ ಸಬ್ ಇನ್‌ಸ್ಪೆಕ್ಟರ್ ಆಗಿ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಮ್ಮ ಅವರನ್ನು ನೇಮಿಸಲಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಂದೀಶ್ ಅವರನ್ನು ನೆಲಮಂಗಲ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈರಮ್ಮ ಅವರು ಠಾಣೆಯಲ್ಲಿ ಅಧಿಕಾರ ಸ್ವೀಕಾರ ಮಾಡಿಕೊಂಡಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಯಂಬ್ರಹಳ್ಳಿ ಗ್ರಾಮಸ್ಥರು ಹಿಡಿದಿದ್ದ ಕಳ್ಳನನ್ನು ವಶಕ್ಕೆ ಪಡೆಯಲು ಸ್ಥಳಕ್ಕೆ ಬಾರದ ಪೊಲೀಸರ ನಿರ್ಲಕ್ಷ್ಯ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಸಂಬಂಧ ಕಾನ್‌ಸ್ಪೆಬಲ್‌ ಒಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಸಬ್ ಇನ್‌ಸ್ಪೆಕ್ಟರ್ ನಂದೀಶ್ ಅವರನ್ನೂ ವರ್ಗಾವಣೆ ಮಾಡಲಾಗಿದೆ.

ADVERTISEMENT

ಠಾಣೆ ಆರಂಭವಾದಾಗಿನಿಂದ ಇದುವರೆಗೂ ಮಹಿಳಾ ಸಬ್ ಇನ್‌ಸ್ಪೆಕ್ಟರ್ ನೇಮಕವಾಗಿರಲಿಲ್ಲ. ಈಗ ಮಹಿಳಾ ಪಿಎಸ್ಐ ನೇಮಕವಾಗಿರುವ ಕಾರಣ ಸ್ಥಳೀಯ ಮಹಿಳಾ ಸಂಘ ಸಂಸ್ಥೆಗಳು ಹಾಗೂ ಮಹಿಳೆಯರಲ್ಲಿ ಧೈರ್ಯ ಬಂದಿದೆ.

‘ನಾವು ಠಾಣೆಗೆ ಹೋಗಿ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿತ್ತು. ಮಹಿಳಾ ಸಿಬ್ಬಂದಿ ಹೆಚ್ಚು ಇಲ್ಲದ ಕಾರಣ ಮಧ್ಯವರ್ತಿಗಳ ಮೊರೆ ಹೋಗಬೇಕಾಗಿತ್ತು. ಈಗ ಪಿಎಸ್ಐ ಆಗಿ ಮಹಿಳೆ ಬಂದಿರುವ ಕಾರಣ ಧೈರ್ಯವಾಗಿ ಹೋಗಿ ಸಮಸ್ಯೆ ಹೇಳಿಕೊಳ್ಳಲು ಅನುಕೂಲವಾಗಲಿದೆ’ ಎಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ನಾಗರತ್ನಮ್ಮ ಹೇಳಿದರು.

ಮತ್ತೊಬ್ಬ ಕಾನ್‌ಸ್ಪೆಬಲ್ ಅಮಾನತು:ವಿಜಯಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತೊಬ್ಬ ಕಾನ್‌ಸ್ಟೆಬಲ್ ಶ್ರೀನಿವಾಸ್ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಯುವತಿಯೊಬ್ಬಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣಕಾರರೊಂದಿಗೆ ಈ ಕಾನ್‌ಸ್ಟೆಬಲ್‌ ಕಾರಿನಲ್ಲಿ ತೆರಳಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋ.ನ. ವಂಶಿಕೃಷ್ಣ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.