ವಿಜಯಪುರ(ದೇವನಹಳ್ಳಿ): ‘ಉತ್ತರ ಕರ್ನಾಟಕದ ಲಿಂಗಾಯತ ಗಾಣಿಗರು 2ಎ ಮೀಸಲಾತಿಗಾಗಿ ಒತ್ತಾಯಿಸುತ್ತಿದ್ದಾರೆ. ಅವರನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಅವಕಾಶ ನೀಡಬಾರದು. ಇಲ್ಲದಿದ್ದರೆ ನಮ್ಮ ಮೀಸಲಾತಿಯನ್ನು ಅವರು ಕಸಿದುಕೊಳ್ಳುತ್ತಾರೆ’ ಎಂದು ನೆಲಮಂಗಲ ಕ್ಷೇತ್ರ ತೈಲೇಶ್ವರ ಗಾಣಿಗ ಮಹಾಸಂಸ್ಥಾನದ ಪೀಠಾಧಿಪತಿ ಪೂರ್ಣಾನಂದಪುರಿ ಸ್ವಾಮೀಜಿ ಹೇಳಿದರು.
ಗಾಣಿಗ ಸೇವಾ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ಸೌಮ್ಯ ಚನ್ನಕೇಶವಸ್ವಾಮಿ ದೇವಾಲಯ ಆವರಣದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗಾಣಿಗ ಸಮುದಾಯವನ್ನು ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಹೊಂದಿರುವ ಸಮುದಾಯಗಳ ಪಟ್ಟಿಗೆ ಸೇರ್ಪಡೆಗೊಳಿಸಿದ್ದರು. ನಾವು ಬಹಳಷ್ಟು ಹೋರಾಟ ನಡೆಸಿ, ಹಿಂದುಳಿದ ಸಮುದಾಯದ ಸಾಲಿಗೆ ಸೇರ್ಪಡೆಗೊಳಿಸಿದೆವು. ಈಗ ಉತ್ತರ ಕರ್ನಾಟಕದ ಲಿಂಗಾಯಿತ ಗಾಣಿಗರು 2ಎ ಮೀಸಲಾತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಹಿಂದುಳಿದ ವರ್ಗಗಳ ಮೀಸಲಾತಿಯಡಿ ಸೇರಿಸಲು ಅವಕಾಶ ನೀಡಬಾರದು. ನಾವೆಲ್ಲರೂ ಹೋರಾಟ ಮಾಡಬೇಕು’ ಎಂದು ಹೇಳಿದರು.
‘ಯಾವ ಸಮುದಾಯದಲ್ಲಿ ವಿದ್ಯಾವಂತರು ಹೆಚ್ಚಾಗುತ್ತಾರೋ ಅಂತಹ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರುತ್ತವೆ. ಗಾಣಿಗ ಸಮುದಾಯದವರು ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದೇವೆ. ಸಮಾಜ ಒಟ್ಟಾಗಬೇಕು. ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು’ ಎಂದು ಹೇಳಿದರು.
ಗಾಣಿಗ ಸೇವಾ ಕ್ಷೇಮಾಭಿವೃದ್ಧಿ ಸಂಘದ ಜಿ.ರಾಜಗೋಪಾಲ್, ‘ನಮ್ಮ ಜನಾಂಗದ ಏಳಿಗೆಗಾಗಿ ತೆರೆದಿರುವ ಮಠವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಮಾಡುವಲ್ಲಿ ಮಠಗಳ ಪಾತ್ರ ಮಹತ್ತರವಾಗಿದೆ’ ಎಂದರು.
ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಅವರಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದೇವೆ. ಇಂದು 80 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಾಧ್ಯಕ್ಷ ವಿ.ಆಂಜಿನಪ್ಪ, ಗೌರವಾಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಆರ್.ವಸಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಲಕ್ಷ್ಮಣ್, ರಾಮುಭಗವಾನ್, ಜಿ.ಮಂಜುನಾಥ್, ಆರ್.ಗಗನ್, ಆರ್. ವರುಣ್, ರಮೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.