ADVERTISEMENT

ಸಕಾಲದಲ್ಲಿ ಸಾಲ ಮರುಪಾವತಿಸಿ: ಕೆ.ರಮೇಶ್

ಆವತಿ ವ್ಯವಸಾಯ ಸೇವಾ ಸಹಕಾರ ಸಂಘದ ವಾರ್ಷಿಕ ಸಭೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 4:49 IST
Last Updated 15 ನವೆಂಬರ್ 2021, 4:49 IST
ದೇವನಹಳ್ಳಿ ತಾಲ್ಲೂಕಿನ ಆವತಿ ವ್ಯವಸಾಯ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಭೆಯಲ್ಲಿ ಮಹಿಳಾ ಸಂಘಗಳಿಗೆ ಸಾಲದ ಚೆಕ್‌ ವಿತರಣೆ ಮಾಡಲಾಯಿತು
ದೇವನಹಳ್ಳಿ ತಾಲ್ಲೂಕಿನ ಆವತಿ ವ್ಯವಸಾಯ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಭೆಯಲ್ಲಿ ಮಹಿಳಾ ಸಂಘಗಳಿಗೆ ಸಾಲದ ಚೆಕ್‌ ವಿತರಣೆ ಮಾಡಲಾಯಿತು   

ದೇವನಹಳ್ಳಿ: ರೈತರು ಹಾಗೂ ಮಹಿಳಾ ಸಂಘಗಳ ಪ್ರತಿನಿಧಿಗಳು ಸಹಕಾರ ಬ್ಯಾಂಕ್‌ನಿಂದ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಂಡು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಸಹಕಾರ ಬ್ಯಾಂಕ್‌ನ ವೃತ್ತಿಪರ ನಿರ್ದೇಶಕ ಕೆ.ರಮೇಶ್ ಹೇಳಿದರು.

ತಾಲ್ಲೂಕಿನ ಆವತಿ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2020-21ನೇ ಸಾಲಿನ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಬ್ಯಾಂಕಿನಲ್ಲಿ ವ್ಯವಹರಿಸಬೇಕು. ರಾಷ್ಟ್ರೀಯ ಬ್ಯಾಂಕ್‌ಗಳಿಗಿಂತಲೂ ಉತ್ತಮವಾದ ಸೌಲಭ್ಯ ಇಲ್ಲಿ ಕಲ್ಪಿಸಿಕೊಡಲಾಗುತ್ತಿದೆ. ಗೃಹನಿರ್ಮಾಣಕ್ಕಾಗಿ ₹40ಲಕ್ಷದವರೆಗೂ ಸಾಲ ಪಡೆಯಬಹುದಾಗಿದೆ. ಚಿನ್ನದ ಮೇಲೆ ₹ 15 ಲಕ್ಷದವರೆಗೂ ಸಾಲ ಪಡೆಯಬಹುದಾಗಿದೆ ಎಂದರು.

ADVERTISEMENT

ಮೊದಲು ಚಿನ್ನದ ಪ್ರಾಮಾಣಿಕತೆ ಪರೀಕ್ಷಿಸಲು ಅಕ್ಕಸಾಲಿಗರನ್ನು ಕರೆಯಿಸಿಕೊಳ್ಳಬೇಕಾಗಿತ್ತು. ಆದರೆ, ಈಗ ಯಂತ್ರದ ಸಹಾಯದಿಂದ ಪರೀಕ್ಷೆ ನಡೆಸುವುದರಿಂದ ಕೇವಲ ಅರ್ಧ ಗಂಟೆಯಲ್ಲಿ ಸಾಲ ಮಂಜೂರು ಮಾಡಿಕೊಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಸಹಕಾರ ಸಂಘದ ಆವರಣದಲ್ಲಿ ಔಷಧಿ ಮಳಿಗೆ ತೆರೆದಿರುವುದರಿಂದ ರೈತರಿಗೆ ಮತ್ತಷ್ಟು ಸೇವೆ ನೀಡಲು ಅನುಕೂಲವಾಗಿದೆ
ಎಂದರು.

ರೈತರು ಸಾಲ ಪಡೆದುಕೊಂಡಷ್ಟು ಬಿಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡಲು ಅನುಕೂಲವಾಗಲಿದೆ. ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ತಮ್ಮ ದೈನಂದಿನ ಹಣಕಾಸಿನ ವ್ಯವಹಾರವನ್ನು ಸಹಕಾರ ಬ್ಯಾಂಕಿನಲ್ಲೇ ಮಾಡುವ ಮೂಲಕ ಉತ್ತಮ ಸೇವೆ ಪಡೆಯಬೇಕು ಎಂದರು.

ಆವತಿ ವಿ.ಎಸ್.ಎಸ್.ಎನ್ ಅಧ್ಯಕ್ಷ ಎ.ಸಿ. ನಾಗರಾಜ್ ಮಾತನಾಡಿ, ಸಹಕಾರ ಸಂಘದಲ್ಲಿ ಉತ್ತಮವಾದ ನಿರ್ವಹಣೆ ಹಾಗೂ ಸೇವೆ ನೀಡಿರುವುದರಿಂದ ಈ ಪ್ರಸಕ್ತ ಸಾಲಿನಲ್ಲಿ ₹17.27 ಲಕ್ಷ ನಿವ್ವಳ ಲಾಭ ಬಂದಿದೆ. ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಮತ್ತಷ್ಟು ಉತ್ತಮವಾದ ಸೇವೆ ನೀಡುವುದು ಹಾಗೂ ಸಹಕಾರ ಸಂಘ ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ ಎಂದರು.

ನಿರ್ದೇಶಕ ಹುರುಳುಗುರ್ಕಿ ಹಸೇನ್ ಸಾಬ್ ಮಾತನಾಡಿದರು.ಬಮೂಲ್ ನಿರ್ದೇಶಕ ಇರಿಗೇನಹಳ್ಳಿ ಬಿ. ಶ್ರೀನಿವಾಸ್, ವಿ.ಎಸ್.ಎಸ್.ಎನ್. ಉಪಾಧ್ಯಕ್ಷ ಎಂ. ದೇವರಾಜ್, ನಿರ್ದೇಶಕರಾದ ಎಚ್.ಸಿ. ಮುನಿರಾಜು, ಎನ್. ರಾಜಗೋಪಾಲ್, ಗೊಬ್ಬರಗುಂಟೆ ರಾಜಗೋಪಾಲ್, ಎಂ. ಮುನಿರಾಜು, ಸಿ. ಸಜ್ಜಾದ್, ಶಾಮಣ್ಣ, ಆಂಜಿನಮ್ಮ, ಸಂಪಂಗಮ್ಮ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿ. ಪ್ರಕಾಶ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಆರ್. ಭರತ್ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.