ADVERTISEMENT

ಸಾಮಾಜಿಕ ನ್ಯಾಯಕ್ಕೆ ಜೀವ ಮುಡಪಾಗಿಟ್ಟ ಜಾಲಪ್ಪ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಾಜಿ ಸಚಿವ ಆರ್.ಎಲ್.ಜಾಲಪ್ಪ ಜನ್ಮಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:01 IST
Last Updated 20 ಅಕ್ಟೋಬರ್ 2025, 4:01 IST
ದೊಡ್ಡಬಳ್ಳಾಪುರದಲ್ಲಿ ಭಾನುವಾರ ನಡೆದ ಆರ್‌.ಎಲ್‌.ಜಾಲಪ್ಪ ಜನ್ಮಶತಮಾನೋತ್ಸವದಲ್ಲಿ ಜಾಲಪ್ಪ ಅವರ ಸಮಾಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪನಮನ ಸಲ್ಲಿಸಿದರು
ದೊಡ್ಡಬಳ್ಳಾಪುರದಲ್ಲಿ ಭಾನುವಾರ ನಡೆದ ಆರ್‌.ಎಲ್‌.ಜಾಲಪ್ಪ ಜನ್ಮಶತಮಾನೋತ್ಸವದಲ್ಲಿ ಜಾಲಪ್ಪ ಅವರ ಸಮಾಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪನಮನ ಸಲ್ಲಿಸಿದರು   

ದೊಡ್ಡಬಳ್ಳಾಪುರ:  ಆರ್‌.ಎಲ್‌. ಜಾಲಪ್ಪ ಅವರಿಗೆ ಹಿಂದುಳಿದವರ ಅಭಿವೃದ್ಧಿ ವಿಚಾರದಲ್ಲಿ ದೂರದೃಷ್ಟಿ ಇತ್ತು. ಹೀಗಾಗಿಯೇ ವೈದ್ಯಕೀಯ ಕಾಲೇಜು ಸ್ಥಾಪಿಸಿದರು. ಸಾಮಾಜಿಕ ನ್ಯಾಯದ ಪರವಾಗಿ ತಮ್ಮ ರಾಜಕೀಯ ಜೀವನವನ್ನು ಮುಡುಪಾಗಿ ಇಟ್ಟಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಹಿರಿಯ ರಾಜಕಾರಣಿ, ಕೇಂದ್ರ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಜನ್ಮಶತಮಾನೋತ್ಸವ ಹಾಗೂ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದರು.

ಜಾಲಪ್ಪ ಅವರ ವ್ಯಕ್ತಿತ್ವ ನೇರ ನಿಷ್ಠುರ ಮತ್ತು ಹೃದಯವಂತಿಕೆಯಿಂದ ಕೂಡಿತ್ತು. ಜಾಲಪ್ಪನವರಿಗೆ ಸಮಯ ಪ್ರಜ್ಞೆ ಇತ್ತು. ಒಬ್ಬ ದಕ್ಷ ಆಡಳಿತಗಾರರಾಗಿದ್ದ ಅವರು ನಿರ್ವಹಿಸಿದ ಎಲ್ಲಾ ಖಾತೆಗಳಲ್ಲೂ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದು ಮಾತ್ರವಲ್ಲ, ರೈತರಿಗೆ, ಕೃಷಿಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ದೇವರಾಜ ಅರಸ್ ಎಜುಕೇಶನಲ್ ಟ್ರಸ್ಟ್‌ ಅನ್ನು‌ ಆರ್.ಎಲ್. ಜಾಲಪ್ಪ ಅವರು ಸ್ಥಾಪಿಸಿರುವುದು ಇಂದಿಗೂ ಚಿರಾಯುವಾಗಿದೆ. ಕೃಷಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಾಧನೆ ಸಲ್ಲಿಸಿರುವ ಆರ್.ಎಲ್. ಜಾಲಪ್ಪ ಅವರ ಹೆಸರಿನಲ್ಲಿ ‌ಪ್ರಶಸ್ತಿ ‌ನೀಡುವ ಕುರಿತು ‌ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಸುಮಾರು ನಾಲ್ಕುವರೆ ಕೋಟಿ ಜನ‌ ಪ್ರಯೋಜನ‌ ಪಡೆದಿದ್ದಾರೆ. ಬಡವರು, ದಲಿತರು ನೆಮ್ಮದಿಯಿಂದ ‌ಜೀವನಮಾಡುತ್ತಿದ್ದಾರೆ. ಇಂದಿರಾಗಾಂಧಿ ಅವರ ಹೆಸರಿನಲ್ಲಿ ‌ಪೌಷ್ಟಿಕ ಆಹಾರ ನೀಡುವ ಕುರಿತು ಚಿಂತನೆ ಮಾಡಲಾಗಿದೆ ಎಂದರು.

ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್‌.ಸುದರ್ಶನ, ಜಾಲಪ್ಪ ಅವರು ಸಹಕಾರ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಸ್ಥಾಪನೆ ಮಾಡಬೇಕು. ಸರ್ಕಾರದ ವತಿಯಿಂದಲೇ ಜಿಲ್ಲೆಯಲ್ಲಿ ಜಾಲಪ್ಪ ಅವರ ಜನ್ಮಶತಮಾನೋತ್ಸವ ಆಚರಿಸಬೇಕೆಂದು ಒತ್ತಾಯಿಸಿದರು.

ಶ್ರೀದೇವರಾಜ ಅರಸ್‌ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಜಿ.ಎಚ್‌.ನಾಗರಾಜ್‌ ಸಮಾರಂಭದ ಅಧ್ಯಕಕ್ಷತೆವಹಿಸಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ, ಕರ್ನಾಟಕ ಆರ್ಯ ಈಡಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ತಿಮ್ಮೇಗೌಡ, ಎಐಸಿಸಿ ಸದಸ್ಯ ಎಂ.ಸಿ.ವೇಣುಗೋಪಾಲ್‌, ಶಾಸಕ ಧೀರಜ್ ಮುನಿರಾಜು, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ,ರಾಣಿಸತೀಶ್‌, ಕೆಎಸ್‌ಆರ್‌ಟಿಸಿ ಮಾಜಿ ಅಧ್ಯಕ್ಷ ಟಿ.ಪ್ರಭಾಕರ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ದೇವರಾಜು ಅರಸು ಎಜುಕೇಶನಲ್ ಟ್ರಸ್ಟ್‌ನ ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಮಾಜಿ ಶಾಸಕ ಟಿ.ವೆಂಕಟರಮಣ್ಯ್ಯ, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಇದ್ದರು.

ತುಪ್ಪದ ದೋಸೆ ಬಡಿಸಿದ್ದರು

ಅತ್ಯಂತ ಧೈರ್ಯವಂತರಾಗಿದ್ದ ಜಾಲಪ್ಪ ಅವರು ಸತ್ಯ ಹೇಳುವಾಗ ಮುಲಾಜಿಲ್ಲದೆ ಎದೆಗಾರಿಕೆ ಪ್ರದರ್ಶಿಸುತ್ತಿದ್ದರು. ಅತ್ಯಂತ ಹೃದಯವಂತರಾಗಿದ್ದ ಜಾಲಪ್ಪನವರು ಆತಿಥ್ಯದಲ್ಲೂ ಎತ್ತಿದ ಕೈ. ಅವರ ಮನೆಗೆ ಹೋದಾಗ ತುಪ್ಪದ ದೋಸೆ ಮಾಡಿ ಸ್ವತಹ ಬಡಿಸಿದ್ದನ್ನು ಸಿದ್ದರಾಮಯ್ಯ ಅವರು ನೆನಪಿಸಿಕೊಂಡರು.

ಹೊಗಳುವವರಿಂದ ದೂರ ಇರಿ

ಎಲ್ಲರು ದೇವರಾಜ ಅರಸ್ ಅವರ ಅನುಯಾಯಿಗಳಾಗಲು ಸಾಧ್ಯವಿಲ್ಲ. ಜಾಲಪ್ಪ ಅವರು ಆ ಸ್ಥಾನಕ್ಕೆ ಅರ್ಹರು. ಇಲ್ಲ ಸಲ್ಲದ ಬಿರುದು ನೀಡಿ ಹೊಗಳುವವರಿಂದ ದೂರವಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಸಭೆ ಮಾಜಿ ಸಭಾಪತಿ ಕೆ.ಆರ್.ರಮೇಶ್ ಕುಮಾರ್ ಸಲಹೆ ನೀಡಿದರು.

‘ನಾನು ಇನ್ನೂ ಎರಡು ವರ್ಷ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಬಾರದು ಅಂದುಕೊಂಡಿದ್ದೆ. ಆದರೆ ಜಾಲಪ್ಪ ಅವರ ಮೇಲಿನ ಅಭಿಮಾನದಿಂದ ಬಂದಿರುವೆ. ಕೋಲಾರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ಜಿಲ್ಲೆಯ ಜನತೆಗೆ ಅತ್ಯಂತ ಹೆಚ್ಚಿನ ಪ್ರಯೋಜನವಾಗಿದೆ’ ಎಂದರು.

ಆರ್‌.ಎಲ್‌.ಜಾಲಪ್ಪ ಅವರ ರಾಜಕೀಯ ಜೀವನದ ಛಾಯಾಚಿತ್ರಗಳನ್ನು ವೀಕ್ಷಣೆ ಮಾಡಿದರು
ದೊಡ್ಡಬಳ್ಳಾಪುರದಲ್ಲಿ ಭಾನುವಾರ ನಡೆದ ಆರ್‌.ಎಲ್‌.ಜಾಲಪ್ಪ ಅವರ ಜನ್ಮಶತಮಾನೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.