ADVERTISEMENT

ದೇವನಹಳ್ಳಿ | ಆರ್‌ಟಿಐನಿಂದ ಪಾರದರ್ಶಕತೆ ಆಡಳಿತ: ಡಾ. ಹರೀಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 2:36 IST
Last Updated 3 ಆಗಸ್ಟ್ 2025, 2:36 IST
ದೇವನಹಳ್ಳಿ ಜಿಲ್ಲಾಡಳಿತ ಭವನದಲ್ಲಿ ಮಾಹಿತಿ ಹಕ್ಕು ಅಧಿನಿಯಮ ತರಬೇತಿ ಕಾರ್ಯಗಾರ ನಡೆಯಿತು
ದೇವನಹಳ್ಳಿ ಜಿಲ್ಲಾಡಳಿತ ಭವನದಲ್ಲಿ ಮಾಹಿತಿ ಹಕ್ಕು ಅಧಿನಿಯಮ ತರಬೇತಿ ಕಾರ್ಯಗಾರ ನಡೆಯಿತು   

ದೇವನಹಳ್ಳಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಆಡಳಿತ ನೀಡಲು ಹಾಗೂ ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ ಹಕ್ಕು(ಆರ್‌ಟಿಐ) ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಮಾಹಿತಿ ಆಯೋಗ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅಧಿನಿಯಮ 2005 ರನ್ವಯ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ  ಮಾತಾನಾಡಿದರು.

ಮಾಹಿತಿ ಹಕ್ಕಿಗೆ ಸರ್ಕಾರವನ್ನು ಬುಡಮೇಲು ಮಾಡುವ ಶಕ್ತಿ ಕೂಡ ಇದೆ. ಜನಪರ ಕಾನೂನು ಜಾರಿಯಾದ ನಂತರ ಅದರ ಬಗ್ಗೆ ಸರ್ಕಾರಿ ಅಧಿಕಾರಿಗಳು ತಿಳಿದಿರಬೇಕು. ಅರ್ಜಿದಾರರು ಕೂಡ ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳದೆ. ಸಮಾಜದ ನೈತಿಕತೆ ಸಾಮಾಜಿಕ ಸ್ವಾತಂತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಆರ್‌ಟಿಐ ಮೂಲಕ ಸಾರ್ವಜನಿಕರು ಮಾಹಿತಿ ಕೇಳಬೇಕು ಎಂದರು.

ADVERTISEMENT

ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಹಣಕಾಸು, ನರೇಗಾ, ಕಂದಾಯ, ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆಗಳಲ್ಲಿ ಹೆಚ್ಚು ಆರ್.ಟಿ.ಐ ಅರ್ಜಿಗಳು ಬರುತ್ತವೆ. ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದಲ್ಲಿ ಶೀಘ್ರ ವಿಲೇವಾರಿ ಮಾಡಬಹುದು ಎಂದರು.

ಪೊಲೀಸ್‌ ಠಾಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬ ಸುಪ್ರೀಂಕೋರ್ಟ್ ಹೇಳಿಕೆ ಆಧರಿಸಿ ಕಡ್ಡಾಯವಾಗಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಹಾಗೆಯೇ ಅವುಗಳನ್ನು ಒಂದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿದೆ. ಕಾಲಕಾಲಕ್ಕೆ ಅರ್ಜಿಗಳ ವಿಲೇವಾರಿ ಮಾಡಬೇಕು ಎಂದರು. 

ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಕಂದಾಯ ಕ್ಕೆ ಸಂಬಂಧಿಸಿದಂತೆ ಎಲ್ಲ ಸೇವೆಯನ್ನು ಆನ್‌ಲೈನ್‌ನಲ್ಲಿ ಸಿಗುವಂತೆ ಮಾಡಲಾಗಿದೆ. ನ್ಯಾಯಲಯಕ್ಕೆ ಸಂಬಂಧಪಟ್ಟ ಮಾಹಿತಿಗಾಗಿ ಆರ್‌ಸಿಸಿಎಂಎಸ್ ಪೋರ್ಟಲ್ ಮತ್ತು ಭೂಮಿಗೆ ಸಂಬಂಧಪಟ್ಟ ಮಾಹಿತಿಗಾಗಿ ಭೂ ಸುರಕ್ಷಾ ಪೋರ್ಟಲ್ ಅಲ್ಲಿ ಮಾಹಿತಿ ಪಡೆಯಬಹುದು ಸರ್ವೆ ದಾಖಲೆ ಕೂಡ ಈಗ ಸಿಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ, ಎಎಸ್ಪಿ ನಾಗರಾಜ್, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶಿವಕುಮಾರ್ ಉಪಸ್ಥಿತರಿದ್ದರು.

ಮಾಹಿತಿ ಅಧಿಕಾರಿಯು ಯಾವುದೇ ಕಾರಣವಿಲ್ಲದೇ ಮಾಹಿತಿಯನ್ನು ನೀಡದಿದ್ದಲ್ಲಿ ಅಥವಾ ದುರುದ್ದೇಶದಿಂದ ತಪ್ಪಾದ ಮಾಹಿತಿ ನೀಡಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಜೊತೆಗೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು
ಹರೀಶ್ ಕುಮಾರ್ ಆಯುಕ್ತ ರಾಜ್ಯ ಮಾಹಿತಿ ಆಯೋಗ
ಸಾರ್ವಜನಿಕ ಹಿತಾಸಕ್ತಿ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಮುಖ್ಯ. ಅಧಿಕಾರಿಗಳು ಯಾವುದೇ ಭಯ ಪಡದೇ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ವಿಲೇವಾರಿ ಮಾಡಿ
ಎ.ಬಿ. ಬಸವರಾಜು ಜಿಲ್ಲಾಧಿಕಾರಿ

ಸಾರ್ವಜನಿಕರಲ್ಲಿ ಅರಿವಿನ ಕೊರತೆ:

ಮಾಹಿತಿ ಹಕ್ಕಿನ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಅಧಿಕಾರಿಗಳಲ್ಲಿ ಅರಿವಿನ ಕೊರತೆ ಇದೆ. ಈ ಕಾಯ್ದೆಯು ಸಾರ್ವಜನಿಕ ಜನಸ್ನೇಹಿ ಕಾಯ್ದೆಯಾಗಿದೆ. ಇದನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. 6(1) ಅಧಿನಿಯಮದ ಪ್ರಕಾರ ಮಾಹಿತಿ ಕೋರಿ ಅರ್ಜಿ ಬಂದರೆ ಅಂತಹ ಅರ್ಜಿಗೆ 30 ದಿನಗಳ ಒಳಗಾಗಿ ಪ್ರತಿ ಪುಟಕ್ಕೆ ₹2 ಗಳಂತೆ ಹಣ ಪಾವತಿಸಿಕೊಂಡು ಮಾಹಿತಿ ನೀಡಬೇಕು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತೆ ಡಾ.ಬಿ.ಆರ್. ಮಮತ ಹೇಳಿದರು. ನಿಗದಿತ ಕಾಲಮಾನಕ್ಕೆ ಮಾಹಿತಿ ನೀಡಲು ಸಾಧ್ಯವಾಗದಿದ್ದಲ್ಲಿ ಉಚಿತವಾಗಿ ಮಾಹಿತಿಯನ್ನು ನೀಡಬೇಕು. 41ಎ ಮತ್ತು 41ಬಿ ಯನ್ನು ಎಲ್ಲಾ ಕಚೇರಿಗಳಲ್ಲಿ ಕಡ್ದಾಯವಾಗಿ ಅಳವಡಿಸಬೇಕು. ಅಧಿಕಾರಿಗಳಿಗೆ ಕಾಲಕಾಲಕ್ಕೆ ತರಬೇತಿಗಳು ನೀಡಬೇಕು ಕಾಯ್ದೆಯ ನಿರ್ಲಕ್ಷ್ಯತೆ ಆಗಬಾರದು ಎಂದು ತಿಳಿಸಿದರು.

440 ದ್ವಿತೀಯ ಮೇಲ್ಮನವಿ ಪ್ರಕರಣ ಬಾಕಿ:

ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂಪೂರ್ಣ ಅರಿವು ಹೊಂದಿದ್ದಲ್ಲಿ ಮಾತ್ರ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ಒದಗಿಸಲು ಸಾಧ್ಯ. ರಾಜ್ಯದಲ್ಲಿ 45000 ದ್ವಿತೀಯ ಹಂತದ ಮೇಲ್ಮನವಿ ಪ್ರಕರಣ ಬಾಕಿ ಇದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು 9ನೇ ಸ್ಥಾನದೊಂದಿಗೆ 1440 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಕೆ. ಬದ್ರುದ್ದೀನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.