ADVERTISEMENT

ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮ ಪಾಲಿಸಿ

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 8:12 IST
Last Updated 18 ಫೆಬ್ರುವರಿ 2021, 8:12 IST
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮಾತನಾಡಿದರು
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮಾತನಾಡಿದರು   

ದೇವನಹಳ್ಳಿ: ‘ಪ್ರತಿಯೊಂದು ಜೀವವೂ ಅತ್ಯಮೂಲ್ಯವಾಗಿದೆ. ಅಪಘಾತದಲ್ಲಿ ಮೃತಪಟ್ಟರೆ ಅವಲಂಬಿತರ ಕುಟುಂಬಗಳು ಅನಾಥವಾಗುತ್ತವೆ. ಹಾಗಾಗಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸದಿದ್ದರೆ ಸುಪ್ರೀಂಕೋರ್ಟ್ ನಿಯಮಾವಳಿ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ ಅಪಘಾತ ವಲಯಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಅಪಘಾತ ಸಂಭವಿಸಿದ ತಕ್ಷಣವೇ ಆಂಬುಲೆನ್ಸ್ ಸೇರಿದಂತೆ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.

ADVERTISEMENT

ಜಿಲ್ಲಾ ವ್ಯಾಪ್ತಿಯಲ್ಲಿರುವ ಹೆದ್ದಾರಿ ಪ್ರಾಧಿಕಾರದ ಕ್ರೇನ್, ಆಂಬುಲೆನ್ಸ್, ಪೆಟ್ರೋಲಿಂಗ್ ವಾಹನಗಳ ಪ್ರಸಕ್ತ ಸ್ಥಿತಿಗತಿ ಬಗ್ಗೆ ‌ಸಮಗ್ರ ಮಾಹಿತಿಯನ್ನು ನಿಗದಿತ ದಿನಾಂಕದೊಳಗೆ ನೀಡಬೇಕು. ಪ್ರಯಾಣಕ್ಕೆ ಅಡಚಣೆಯಾಗುವ ಮರಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.

2019ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 680 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣ ಕಡಿಮೆಮಾಡಲು ಎಲ್ಲಾ ಇಲಾಖೆಗಳು ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು. ಜೊತೆಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಕ್ರಮಗಳು ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಜಿಲ್ಲೆಯಲ್ಲಿ 60 ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ 15 ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರತಿ ದಿನ 2-3 ಅಪಘಾತ ಸಂಭವಿಸುತ್ತಿದ್ದು, ಮುಂದಿನ ವರ್ಷದೊಳಗೆ ಅಪಘಾತ ಪ್ರಮಾಣದಲ್ಲಿ ಶೇಕಡ 10ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಉತ್ತರ ಕರ್ನಾಟಕದಿಂದ ರಾಜಧಾನಿಗೆ ಬರಲು ನೆಲಮಂಗಲ ಹೆಬ್ಬಾಗಿಲು ಆಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಸಿಬ್ಬಂದಿ ಯಾರೊಂದಿಗೂ ಅನುಚಿತವಾಗಿ ವರ್ತಿಸಬಾರದು. ಟೋಲ್‌ಗಳಲ್ಲಿ ಅಗತ್ಯವಿರುವ ಕಡೆ ಪೊಲೀಸ್ ಇಲಾಖೆಯಿಂದ ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಿ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು.

ಪ್ರಮುಖ ಸ್ಥಳಗಳಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಬೇಕು. ಹೆದ್ದಾರಿಯಲ್ಲಿ ಜೀಬ್ರಾ ಪಟ್ಟಿ ಮಾರ್ಕಿಂಗ್, ಅಂಡರ್ ಪಾಸ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಶೀಘ್ರವೇ ಪಾದಚಾರಿಗಳು ಬಳಸಲು ಅನುವಾಗುವಂತೆ ಒಂದು ತಿಂಗಳ ಅವಧಿಯಲ್ಲಿ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಬಾರದು. ಇದರಿಂದ ಅನಾಹುತ ತಪ್ಪಿಸಬಹುದು ಎಂದರು.

ಹೆದ್ದಾರಿ ಪಕ್ಕದ ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಬಕಾರಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಅಪಘಾತ ಪ್ರಕರಣಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಅಪಘಾತ ಸಂಭವಿಸಿದ ವ್ಯಕ್ತಿಗಳನ್ನು ಪರೀಕ್ಷಿಸಿ ಶೀಘ್ರವೇ ವರದಿ ನೀಡಬೇಕು ಎಂದರು.

ಪೊಲೀಸ್ ಇಲಾಖೆಯಿಂದ ಟ್ರ್ಯಾಕ್ಟರ್, ಎತ್ತಿನಗಾಡಿ ಮತ್ತು ಬಿಡಾಡಿ ದನಗಳಿಗೆ ರೇಡಿಯಂ ಸ್ಟಿಕ್ಕರ್ ಅಳವಡಿಸಲಾಗುವುದು. ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸದಂತೆ ತಡೆಯಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿಗಣೇಶ್, ಡಿವೈಎಸ್‌ಪಿ ಟಿ. ರಂಗಪ್ಪ, ಆರ್ಟಿಒ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.