ADVERTISEMENT

ಸಾಲುಮರದ ತಿಮ್ಮಕ್ಕ ನಿಧನ: ತಾತನ ಸಮಾಧಿ ಪಕ್ಕದಲ್ಲೇ ಅಜ್ಜಿ ಅಂತ್ಯಕ್ರಿಯೆ ನಡೆಯಲಿ..

ಹುಲಿಕಲ್‌ ಗ್ರಾಮಸ್ಥರು, ತಿಮ್ಮಕ್ಕ ಕುಟುಂಬ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 15:12 IST
Last Updated 14 ನವೆಂಬರ್ 2025, 15:12 IST
ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ತಿಮ್ಮಕ್ಕ ಅವರ ದತ್ತುಪುತ್ರ ಬಳ್ಳೂರು ಉಮೇಶ್ ಮತ್ತು ಸಂಬಂಧಿಕರ ಜೊತೆ ಶಾಸಕ ಎಚ್.ಸಿ. ಬಾಲಕೃಷ್ಣ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಇದ್ದಾರೆ
ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ತಿಮ್ಮಕ್ಕ ಅವರ ದತ್ತುಪುತ್ರ ಬಳ್ಳೂರು ಉಮೇಶ್ ಮತ್ತು ಸಂಬಂಧಿಕರ ಜೊತೆ ಶಾಸಕ ಎಚ್.ಸಿ. ಬಾಲಕೃಷ್ಣ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಇದ್ದಾರೆ   

ರಾಮನಗರ: ಸಾಲುಮರದ ತಿಮ್ಮಕ್ಕ ಅವರ ಅಂತಿಮ ಕ್ರಿಯೆ ಅವರ ಸ್ವಗ್ರಾಮ ಹುಲಿಕಲ್‌ನಲ್ಲಿ ನೆರವೇರಿಸಬೇಕೆಂದು ಸಂಬಂಧಿಕರು ಹಾಗೂ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು.

ಅಂತಿಮ ದರ್ಶನ ಪಡೆದ ಶಾಸಕ ಎಚ್‌.ಸಿ.ಬಾಲಕೃಷ್ಣ, ತಿಮ್ಮಕ್ಕ ಅವರ ದತ್ತು ಪುತ್ರ ಬಳ್ಳೂರು ಉಮೇಶ್‌ ಹಾಗೂ ಸಂಬಂಧಿಕರ ಜೊತೆ ಸಭೆ ನಡೆಸಿದರು.

ಸಂಬಂಧಿಕರು ಮಾತನಾಡಿ, ‘ಅಜ್ಜಿ, ನಮ್ಮೂರಲ್ಲೇ ಗಿಡ ನೆಟ್ಟು, ಇಲ್ಲಿಂದಲೇ ಜನಪ್ರಿಯರಾದರು. ತಾತನ ಸಮಾಧಿ ನಮ್ಮೂರಿನ ಅವರ ಜಮೀನಿನಲ್ಲೇ ಇದೆ. ಅಜ್ಜಿ ಅಂತ್ಯಕ್ರಿಯೆ ತಾತನ ಸಮಾಧಿ ಪಕ್ಕದಲ್ಲೇ ಮಾಡಬೇಕು. ಅಲ್ಲದೆ, ಅಂತ್ಯಕ್ರಿಯೆ ಸ್ಥಳವನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಗ್ರಾಮಸ್ಥರೂ ದನಿಗೂಡಿಸಿದರು’.

ADVERTISEMENT

‘ಅಜ್ಜಿ ಗೌರವಯುತವಾಗಿ ಬದುಕಿದ್ದಾರೆ. ಅವರು ದೇಶದ ಆಸ್ತಿ. ಅವರನ್ನು ಗೌರವಯುತವಾಗಿ ಕಳುಹಿಸಿ ಕೊಡಬೇಕಿದೆ. ಎಲ್ಲಿ ಅಂತ್ಯಕ್ರಿಯೆ ಮಾಡಬೇಕೆಂದು ಸರ್ಕಾರ ನಿರ್ಧರಿಸಲಿದೆ. ಇದಕ್ಕೆ ತಲೆ ಬಾಗುತ್ತೇನೆ. ಈ ವಿಷಯದಲ್ಲಿ ಗೊಂದಲ ಬೇಡ’ ಎಂದು ದತ್ತು ಪುತ್ರ ಬಳ್ಳೂರು ಉಮೇಶ್‌ ತಿಳಿಸಿದರು.

ಎಲ್ಲರ ಮಾತು ಆಲಿಸಿದ ಶಾಸಕ ಬಾಲಕೃಷ್ಣ, ‘ತಿಮ್ಮಕ್ಕ ತಾಲ್ಲೂಕಿನ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗಿದವರು. ಅವರು ನಮ್ಮ ಸ್ವತ್ತಲ್ಲ. ಸರ್ಕಾರದ ಸ್ವತ್ತು. ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿಕುಮಾರ್‌, ಗೃಹ ಸಚಿವ ಜಿ.ಪರಮೇಶ್ವರ ಅವರು ಎಲ್ಲಿ ಅಂತ್ಯಕ್ರಿಯೆ ನಡೆಸಬೇಕೆಂದು ತೀರ್ಮಾನಸಲಿದ್ದಾರೆ’ ಎಂದರು.

ಇಂದು ಸಾರ್ವಜನಿಕ ದರ್ಶನ: ಹುಲಿಕಲ್‌ ಗ್ರಾಮಕ್ಕ ಅವರ ಮೃತದೇಹವನ್ನು ಶುಕ್ರವಾರ ಸಂಜೆ 4.30ಕ್ಕೆ ತರಲಾಯಿತು. 6.30ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ಆಂಬುಲೆನ್ಸ್‌ ಮೂಲಕ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಳ್ಳೂರಿಗೆ ಕೊಂಡ್ಯೊಯಲಾಯಿತು. ಅಲ್ಲೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಶನಿವಾರ ಬೆಳಗ್ಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ತಿಮ್ಮಕ್ಕ ಹೆಸರಲ್ಲಿ ಸರ್ಕಾರಿ ಯೋಜನೆ

ಸೂರ್ಯ- ಚಂದ್ರ ಇರುವ ತನಕ ತಿಮ್ಮಕ್ಕನ ಹೆಸರು ಅಜರಾಮರವಾಗಿರಲಿದೆ. ಅವರ ಹೆಸರಿನಲ್ಲಿ ಜನ ಉಪಯೋಗಿ ಯೋಜನೆ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಪರಿಸರಕ್ಕೆ ಕೊಟ್ಟ ಕೊಡುಗೆ ಅಪಾರ. ಈ ನೆಲದಲ್ಲಿ ಮತ್ತೊಮ್ಮೆ ಸಾಲುಮರದ ತಿಮ್ಮಕ್ಕ ಹುಟ್ಟಬೇಕೆಂಬುದು ನನ್ನನ್ನು ಸೇರಿ ಲಕ್ಷಾಂತರ ಮಂದಿ ಬಯಕೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.