ADVERTISEMENT

ಸಮೇತನಹಳ್ಳಿ: ರಸ್ತೆ ಬದಿ ಕಸಕ್ಕೆ ಯಾರು ಹೊಣೆ?

ಸಮೇತನಹಳ್ಳಿಯ ರಸ್ತೆ ಇಕ್ಕೆಲ್ಲಗಳಲ್ಲಿ ಕಸ l ವಿಲೇವಾರಿಯಾಗದ ತ್ಯಾಜ್ಯ, ದುರ್ನಾತ; ಕಾಯಿಲೆ ಭೀತಿ lಕಣ್ಮಚ್ಚಿ ಕುಳಿತ ಗ್ರಾಮ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 2:09 IST
Last Updated 24 ನವೆಂಬರ್ 2025, 2:09 IST
ಸಮೇತನಹಳ್ಳಿ ಕೆರೆ ಕಟ್ಟೆ ಬಳಿ ಕಸ
ಸಮೇತನಹಳ್ಳಿ ಕೆರೆ ಕಟ್ಟೆ ಬಳಿ ಕಸ   

ಸಮೇತನಹಳ್ಳಿ (ಹೊಸಕೋಟೆ):ಸಮೇತನಹಳ್ಳಿಗೆ ಆಗಮಿಸುವವರಿಗೆ ಮೊದಲಿಗೆ ರಸ್ತೆ ಇಕ್ಕೆಲ್ಲಗಳಲ್ಲಿರುವ ಕಸದ ರಾಶಿ ಸ್ವಾಗತ ಕೋರುತ್ತದೆ.  ಜನರು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಕಸ ತುಂಬಿ ಬೀಸಾಕುತ್ತಿದ್ದು, ತ್ಯಾಜ್ಯದ ರಾಶಿ ಬೆಳೆಯುತ್ತಿದೆ. ಕಸದ ರಾಶಿ ವಿಲೇವಾರಿಯಾಗದೆ ದುರ್ನಾತ ಬೀರುತ್ತಿದೆ. ಸಾಂಕ್ರಾಮಿಕ ಕಾಯಿಲೆ ಹರಡುವ ತಾಣವಾಗಿದೆ.

–ಇದಕ್ಕೆ ಹೊಣೆಗಾರರು ಎಲ್ಲೆಂದರಲ್ಲಿ ಕಸ ಸುರಿಯುವ ಜನರೋ ಅಥವಾ ಸೂಕ್ತ ಕ್ರಮ ಕೈಗೊಳ್ಳದ ಗ್ರಾಮ ಪಂಚಾಯಿತಿಯೋ ಎಂಬ ಚರ್ಚೆ ಪ್ರಜ್ಞಾವಂತರಲ್ಲಿ ಆರಂಭವಾಗಿದೆ.

ಕಸ ಸಂಗ್ರಹ ವಾಹನಕ್ಕೆ ಕಸ ನೀಡದೆ, ಕಸ ಸುರಿಯಲು ನಿಗದಿ ಪಡಿಸಿದ ಜಾಗದಲ್ಲಿ ಕಸ ಹಾಕದ ಕೆಲವರು ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಹೀಗೆ ಕಸ ಸುರಿಯುವುದರಿಂದ ಊರಿನ ಸೌಂದರ್ಯ ಹಾಳಾಗಿ, ಗಲೀಜು ತಾಂಡವವಾಡುತ್ತಿದೆ. ಈ ತ್ಯಾಜ್ಯದ ರಾಶಿ ವಿಲೇವಾರಿಯಾಗದೆ ಕೊಳೆಯುತ್ತಿದೆ. ಕೆಲವರು ಇದಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಸಾಂಕ್ರಮಿಕ ಸೇರಿದಂತೆ ಹಲವು ಕಾಯಿಲೆ ಹರಡುವ ಭೀತಿ ಹೆಚ್ಚಾಗಿದೆ. 

ADVERTISEMENT

ಈ ಸಮಸ್ಯೆಗೆ ಹೊಣೆಗಾರರು ಯಾರು ಎಂಬ ಪ್ರಶ್ನೆ ಮೂಡಿದೆ. ತಮಗಿಷ್ಟ ಬಂದಂತೆ ರಸ್ತೆ ಬದಿಯಲ್ಲಿ ಕಸ ಸುರಿಯುವವರೇ, ಇಲ್ಲ ಈ ಕಸವನ್ನು ವಿಲೇವಾರಿ ಮಾಡದ, ಎಲ್ಲೆಂದರಲ್ಲಿ ಕಸ ಸುರಿಯುವುದಕ್ಕೆ ಕಡಿವಾಣ ಹಾಕದ, ಕಸ ಸುರಿಯುವರ ವಿರುದ್ಧ ಕ್ರಮ ಕೈಗೊಳ್ಳದ ಗ್ರಾಮ ಪಂಚಾಯಿತಿಯೇ? ಎಂಬ ಚರ್ಚೆ ಪ್ರಜ್ಞಾವಂತ ವಲಯದಲ್ಲಿ ನಡೆಯುತ್ತಿದೆ.

ಗ್ರಾಮಸ್ಥರು ನಿತ್ಯ ಗ್ರಾಮದಿಂದ ಅನುಗೊಂಡನಹಳ್ಳಿ, ತಿರುಮಶೆಟ್ಟಿಹಳ್ಳಿ, ನಾಗನಾಯಕನಹಳ್ಳಿ ಸೇರಿದಂತೆ ಯಾವ ರಸ್ತೆಗಳತ್ತ ಪ್ರಯಾಣ ಬೆಳೆಸಿದರೂ ರಸ್ತೆ ಇಕ್ಕೆಲ್ಲಗಳಲ್ಲಿರುವ ಕಸ ರಾಶಿ ಕಣ್ಣಿಗೆ ರಾಚುತ್ತದೆ. ಕಸದ ರಾಶಿ ದಿನೇ ದಿನೇ ಬೆಳೆದಂತೆ ದುರ್ನಾತವು ತೀವ್ರಗೊಂಡಿದೆ. ರಸ್ತೆಗಳಲ್ಲಿ ಮೂಗಿ ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಮೇತನಹಳ್ಳಿಯಲ್ಲಿ ಕೆರೆ–ಕಟ್ಟೆ ಮೇಲೆ ಸುರಿಯುತ್ತಿರುವುದು. ಕಸದ ರಾಶಿ ವಿಲೇವಾರಿ ಆಗುತ್ತಿಲ್ಲವೆಂದು ‘ಪ್ರಜಾವಾಣಿ’ ಯಲ್ಲಿ ಜೂನ್ 11 ರಂದು ವರದಿ ಪ್ರಕಟಿಸಲಾಗುತ್ತು. ವರದಿಗೆ ಮುಖ್ಯಮಂತ್ರಿಯ ಕಚೇರಿಯು ಸ್ಪಂದಿಸಿತ್ತು. ಕುಂದು ಕೊರತೆವಿಭಾಗದ ವಿಶೇಷ ಕರ್ತವ್ಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದಾದ ಬಳಿಕ ಯಾವುದೇ ಬದಲಾವಣೆ ಕಂಡಿಲ್ಲ. ಕೆರೆ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆಯೇ ಹೊರತು ರಸ್ತೆಗಳ ಬದಿ ಕಸ ಸುರಿಯುತ್ತಿರುವುದಕ್ಕೆ ಕಡಿವಾಣ ಬಿದಿಲ್ಲ.

ಸಮೇತನಹಳ್ಳಿ ಗ್ರಾಮದ ಹೆದ್ದಾರಿ, ಕೆರೆ ಅಂಗಳ, ಕೆರೆ ಕಟ್ಟೆ, ಅಪಾರ್ಟ್‌ಮೆಂಟ್‌, ಅಯ್ಯಪ್ಪಸ್ವಾಮಿ ದೇವಸ್ಥಾನ, ಶಾಲಾ–ಕಾಲೇಜು ಸುತ್ತಮುತ್ತ ಕಸ ಸುರಿಯಲಾಗುತ್ತಿದೆ. ಆದರೆ ಗ್ರಾಮ ಪಂಚಾಯಿತಿಯವರು ಕಣ್ಮುಚ್ಚಿ ಕುಳಿತ್ತಿದ್ದಾರೆ. ಸಮೇತನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೊರಳುರು, ಮಲ್ಲಸಂದ್ರ, ನಡುವತ್ತಿ, ತಿರುಮಶೆಟ್ಟಿಹಳ್ಳಿಯಲ್ಲೂ ಸ್ವಚ್ಛತೆ ಮರಿಚೀಕೆಯಾಗಿದೆ.

ಸಮೇತಹಳ್ಳಿಯ ನಾರಾಯಣ ಕಾಲೇಜು ಬಳಿ ರಸ್ತೆಯಲ್ಲಿ ಕಸ
ಹೊರ ರಾಜ್ಯದವರಿಗೆ ಕಸದ ಸ್ವಾಗತ
ರಾಷ್ಟ್ರೀಯ ಹೆದ್ದಾರಿ ಯಾವುದೇ ಗ್ರಾಮದ ಬಳಿ ಹಾದು ಹೋದರೆ ಆ ಗ್ರಾಮ ಸಹಜವಾಗಿಯೇ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಇಲ್ಲ ಅಭಿವದ್ಧಿ ಮತ್ತು ಸ್ವಚ್ಛತೆ ಮರಿಚೀಕೆಯಾಗಿದೆ. ಹೆದ್ದಾರಿ ಇಕ್ಕೆಲ್ಲಗಳಲ್ಲಿಯೂ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಹೊರ ರಾಜ್ಯಗಳ ಬಸ್‌ ಇದೇ ಹೆದ್ದಾರಿಯಲ್ಲಿ ಸಂಚರಿಸುವವರಿಂದ ಹೊರ ರಾಜ್ಯದವರಿಗೆ ಕಸದ ರಾಶಿ ಸ್ವಾಗತ ಕೋರಿದಂತಿದೆ.
ಕೆರೆ ಅಂಗಳದಲ್ಲೂ ಕಸ

4 ಸಾವಿರ ಮನೆಗೆ ಒಂದು ವಾಹನ

ಇತ್ತೀಚಿನ ದಿನಗಳಲ್ಲಿ ಸಮೇತನಹಳ್ಳಿಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮದಲ್ಲಿ ಸುಮಾರು 4,000 ಮನೆಗಳಿವೆ. ಅಷ್ಟು ಮನೆಗಳಿಂದ ಕಸ ಸಂಗ್ರಹಿಸಲು ಒಂದೇ ಒಂದು ಸಣ್ಣ ವಾಹನವಿದೆ. ಕಸ ಹಾಕಬೇಕೆಂದರೆ ದುಡ್ಡುಕೊಡಬೇಕು ಇಲ್ಲವೆಂದರೆ ಕಸ ಹಾಕಿಸಿಕೊಳ್ಳುವುದಿಲ್ಲ. ಹೀಗಾಗಿ ಜನ ಬೆಳ್ಳಗೆ ಇಲ್ಲವೇ ರಾತ್ರಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದಾರೆ.

ಎಸ್. ಎನ್. ರಾಜ, ಸ್ಥಳೀಯ ನಿವಾಸಿ

ನಾಗಣಕನ ಕೋಟೆಗೆ ಹೋಗುವ ಕೆರೆ ಕಟ್ಟೆಯ ಮೇಲೆ ಕಸ

ಬೇಜವಾಬ್ದಾರಿ ಗ್ರಾಮ ಪಂಚಾಯಿತಿ

ರಸ್ತೆಯ ಇಕ್ಕೆಲಗಳಲ್ಲಿ ಕಸ ಸುರಿಯಲಾಗುತ್ತಿದೆ ಎಂದು ಪಂಚಾಯಿತಿ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನೆ ಇಲ್ಲ. ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಪಂಚಾಯಿತಿಯವರು ವರ್ತಿಸುತ್ತಿದ್ದಾರೆ. ಇವರ ಬೇಜವಾಬ್ದಾರಿತನದಿಂದ ಗ್ರಾಮದ ಸ್ವಚ್ಛತೆ ಹದಗೆಟ್ಟಿದೆ.

ಪ್ರಭುದೇವಯ್ಯ, ರೈತ, ಓಬಾಳಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.