ADVERTISEMENT

ಜಾತ್ಯತೀತ ತತ್ವವೇ ಕಾಂಗ್ರೆಸ್‌ ಜೀವಾಳ: ಸಂಸದ ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 2:43 IST
Last Updated 6 ಏಪ್ರಿಲ್ 2021, 2:43 IST
ಆನೇಕಲ್ ತಾಲ್ಲೂಕಿನ ಗೌರೇನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಬಿ.ಶಿವಣ್ಣ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಗೌರೇನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಬಿ.ಶಿವಣ್ಣ ಉದ್ಘಾಟಿಸಿದರು   

ಆನೇಕಲ್: ‘ಜಾತ್ಯತೀತ ತತ್ವಗಳಲ್ಲಿ ನಂಬಿಕೆಯಿಟ್ಟು ಎಲ್ಲಾ ಜಾತಿ ಧರ್ಮಗಳನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಯ ಚಿಂತನೆಯಿರುವ ಪಕ್ಷ ಕಾಂಗ್ರೆಸ್’ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು.

ತಾಲ್ಲೂಕಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರೇನಹಳ್ಳಿಯಲ್ಲಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರನ್ನು ಬರಮಾಡಿಕೊಂಡು ಮಾತನಾಡಿದರು.

‘ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ಎಲ್ಲಾ ವರ್ಗದ ಜನರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗುತ್ತಿದ್ದಾರೆ. ದೇಶದ ಅಭಿವೃದ್ಧಿಯ ದೃಷ್ಟಿಕೋನದಿಂದ ಕಾಂಗ್ರೆಸ್‌ ಕೆಲಸ ಮಾಡಿದೆ. ಆದರೆ ಏಳು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಜನರ ಭಾವನೆಗಳೊಂದಿಗೆ ಆಟವಾಡಿ ಚುನಾವಣೆಯಲ್ಲಿ ಗೆಲ್ಲುತ್ತಿದೆ. ಸುಳ್ಳುಗಳ ಮೂಲಕ ಜನರನ್ನು ವಂಚಿಸುತ್ತಿದೆ’ ಎಂದರು.

ADVERTISEMENT

‘ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಪೆಟ್ರೋಲ್‌-ಡಿಸೇಲ್, ಗ್ಯಾಸ್‌ ಬೆಲೆ ಗಗನಕ್ಕೇರಿದೆ. ಆಹಾರ ಪದಾರ್ಥಗಳು ಅತ್ಯಂತ ತುಟ್ಟಿಯಾಗಿವೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ವಿವಿಧ ನೀತಿಗಳ ಮೂಲಕ ಉದ್ಯೋಗಗಳನ್ನು ಕಡಿತಗೊಳಿಸಿ ನಿರುದ್ಯೋಗ ಹೆಚ್ಚಿಸಿದೆ’ ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ ‘ಕಾಂಗ್ರೆಸ್ ಪಕ್ಷ ಜಾರಿಗೆ ತಂದ ಜನಪರ ಕಾರ್ಯಕ್ರಮಗಳನ್ನು ಬಿಜೆಪಿ ರದ್ದು ಮಾಡುವ ಮೂಲಕ ಜನವಿರೋಧಿ ಸರ್ಕಾರವಾಗಿದೆ’ ಎಂದರು.

ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಮುಖಂಡ ಹೊನ್ನಕಳಸಾಪುರ ಗೋಪಾಲಪ್ಪ ಮಾತನಾಡಿ, ‘ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಬಿ.ಶಿವಣ್ಣ ಅವರ ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ತೀರ್ಮಾನ ಕೈಗೊಂಡಿದ್ದೇನೆ’ ಎಂದರು.

ಮುಖಂಡರಾದ ಗೋಪಾಲಪ್ಪ, ಫಯಾಜ್, ದೌಲತ್, ಇಮ್ರಾನ್, ಅಲ್ತಾಫ್‌, ಸಿಕಂದರ್‌, ಮುಬಾಕರ್, ಏಜಾಜ್, ಮುನಾವರ್, ಬಾಬು ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ, ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್, ಪುರಸಭಾ ಅಧ್ಯಕ್ಷ ಎನ್.ಎಸ್.ಪದ್ಮನಾಭ್, ಕಾಂಗ್ರೆಸ್‌ ಪರಿಶಿಷ್ಟ ಜಾತಿ ಘಟಕದ ತಾಲ್ಲೂಕು ಅಧ್ಯಕ್ಷ ಹುಸ್ಕೂರು ಮದ್ದೂರಪ್ಪ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಗೌಡ, ಮುಖಂಡರಾದ ಎನ್‌.ಬಿ.ಐ.ನಾಗರಾಜು, ಸಿ.ಕೆ.ಚಿನ್ನಪ್ಪ, ಕೆಂಪರಾಜು, ಶ್ರೀರಾಮ್, ಬಾಡರಹಳ್ಳಿ ಲೋಕೇಶ್, ಮುನಿಕೃಷ್ಣ, ತಿಮ್ಮಣ್ಣ, ರಘು, ಸಿಡಿಹೊಸಕೋಟೆ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.