ADVERTISEMENT

ಪ್ರಗತಿಗೆ ಸ್ವಯಂ ಉದ್ಯೋಗ ಸಹಕಾರಿ

ಆಡೆಸೊಣ್ಣಹಟ್ಟಿ: ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 3:00 IST
Last Updated 7 ಸೆಪ್ಟೆಂಬರ್ 2022, 3:00 IST
ಆನೇಕಲ್ ತಾಲ್ಲೂಕಿನ ಆಡೆಸೊಣ್ಣಹಟ್ಟಿಯಲ್ಲಿ ಆಯೋಜಿಸಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪದಲ್ಲಿ ಕಲಿಕಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ ವೆಂಕಟಸ್ವಾಮಿ ಪ್ರಮಾಣ ಪತ್ರ ವಿತರಿಸಿದರು
ಆನೇಕಲ್ ತಾಲ್ಲೂಕಿನ ಆಡೆಸೊಣ್ಣಹಟ್ಟಿಯಲ್ಲಿ ಆಯೋಜಿಸಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪದಲ್ಲಿ ಕಲಿಕಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ ವೆಂಕಟಸ್ವಾಮಿ ಪ್ರಮಾಣ ಪತ್ರ ವಿತರಿಸಿದರು   

ಆನೇಕಲ್:ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡೆಸೊಣ್ಣಹಟ್ಟಿಯಲ್ಲಿ ಮಂಗಳವಾರಪಂಚಾಯಿತಿಯಿಂದ ಆಯೋಜಿಸಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪದಲ್ಲಿ ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಪಂಚಾಯಿತಿ ಅಧ್ಯಕ್ಷೆ ಸರಿತಾ ವೆಂಕಟಸ್ವಾಮಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕು. ಈ ನಿಟ್ಟಿನಲ್ಲಿ ಹೊಲಿಗೆ, ಬ್ಯುಟಿಷಿಯನ್‌ ಸೇರಿದಂತೆ ವಿವಿಧ ವೃತ್ತಿ ಕೌಶಲ ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.

ಹೊಲಿಗೆ ತರಬೇತಿ ಪಡೆದವರಿಗೆ ಹೆಚ್ಚಿನ ಅವಕಾಶಗಳಿವೆ. ಸ್ವಯಂ ಉದ್ಯೋಗ ಮಾಡುವ ಮೂಲಕ ಆದಾಯ ಗಳಿಸಲು ಸಾಧ್ಯ ವಿದೆ. ಗಾರ್ಮೆಂಟ್ಸ್‌ಗಳಲ್ಲೂ ಉದ್ಯೋಗಾ ವಕಾಶ ಹೆಚ್ಚಾಗಿದೆ. ಮಹಿಳಾ ಸಂಘಗಳು ಒಗ್ಗೂಡಿ ಟೈಲರಿಂಗ್‌ ಕ್ಲಸ್ಟರ್‌ ಸ್ಥಾಪಿಸಿಕೊಂಡು ವಿವಿಧ ಕಂಪನಿಗಳಿಗೆ ಸಿದ್ಧಉಡುಪು ಪೂರೈಸುವ ಮೂಲಕ ಉದ್ಯಮಿಗಳಾಗುವ ದಿಸೆಯಲ್ಲಿ ಪ್ರಯತ್ನ ಮಾಡಬೇಕು ಎಂದರು.

ADVERTISEMENT

ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗದೆ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿಯು ಮಹಿಳೆಯರ ಸಬಲೀಕರಣಕ್ಕಾಗಿ ಉದ್ಯೋಗ ತರಬೇತಿ, ಮಾರ್ಗದರ್ಶನ ಶಿಬಿರ ಹಮ್ಮಿಕೊಂಡಿದ್ದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ ಎಂದರು.

ಪಂಚಾಯಿತಿ ಸದಸ್ಯ ಬಂಡಾಪುರ ರಮೇಶ್‌ ರೆಡ್ಡಿ ಮಾತನಾಡಿ, ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಲಿಗೆ ತರಬೇತಿ ಪಡೆದ ನೂರಾರು ಮಹಿಳೆಯರಿಗೆ ಖಾಸಗಿ ಕಂಪನಿಯ ನೆರವಿನಿಂದ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಲಾಗಿದೆ. ಬಂಡಾಪುರ, ಆಡೆಸೊಣ್ಣಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಂಚಾಯಿತಿಯಿಂದ ಹೊಲಿಗೆ ತರಬೇತಿ ನೀಡಿ ವೃತ್ತಿ ಕೌಶಲ ಬೆಳೆಸಿಕೊಳ್ಳಲು ನೆರವಾಗಿದೆ ಎಂದು ಮಾಹಿತಿ ನೀಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ ಮಾತನಾಡಿ, ಪಂಚಾಯಿತಿಯು ವಿನೂತನ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಮಾದರಿಯಾಗಿದೆ. ಎಲ್ಲಾ ಗ್ರಾಮಗಳಲ್ಲೂ ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲು ಕ್ರಿಯಾಯೋಜನೆ ರೂಪಿಸಲಾಗುವುದು. ಮಹಿಳೆಯರು ಪಂಚಾಯಿತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅಭಿವೃದ್ಧಿಗೆ ಬಲ ನೀಡಬೇಕು ಎಂದು ಸಲಹೆ ನೀಡಿದರು.

ಸದಸ್ಯರಾದ ಸುಧಾ, ಕೃಷ್ಣಪ್ಪ, ಕಾರ್ಯದರ್ಶಿ ಶ್ರೀಧರ್, ಲೆಕ್ಕಾಧಿಕಾರಿ ಯೋಗೇಶ್, ಸಂಪನ್ಮೂಲ ವ್ಯಕ್ತಿ ಪಾರ್ವತಮ್ಮ, ಮುಖಂಡರಾದ ಮುನಿರಾಜು, ವೆಂಕಟೇಶ್, ಮುನಿಯಪ್ಪ, ರಾಮಚಂದ್ರಪ್ಪ, ಗೋಪಾಲಪ್ಪ, ಪಿಳ್ಳಪ್ಪ, ಮುನಿರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.