ADVERTISEMENT

ರಥಯಾತ್ರೆ ಬಹಿಷ್ಕರಿಸಿದ ಶಾಸಕ

‘ಮೃತ್ತಿಗೆ ಸಂಗ್ರಹ’ ಬಿಜೆಪಿ ಕಾರ್ಯಕ್ರಮದಂತಿದೆ: ಶರತ್ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:04 IST
Last Updated 28 ಅಕ್ಟೋಬರ್ 2022, 7:04 IST
ರಥಯಾತ್ರೆಯಲ್ಲಿ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳ ಭಾವಚಿತ್ರ ಹಾಕಿಲ್ಲವೆಂದು ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು
ರಥಯಾತ್ರೆಯಲ್ಲಿ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳ ಭಾವಚಿತ್ರ ಹಾಕಿಲ್ಲವೆಂದು ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು   

ಹೊಸಕೋಟೆ: ಕೆಂಪೇಗೌಡರ ಪ್ರತಿಮೆಗೆ ಮೃತ್ತಿಕೆ ಮತ್ತು ಜಲ ಸಂಗ್ರಹಿಸುವ ರಥಯಾತ್ರೆ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಬಹಿಷ್ಕರಿಸಿ ಹೊರ ನಡೆದರು.

ಕಾರ್ಯಕ್ರಮ ಆರಂಭವಾಗುವ ವೇಳೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಶಾಸಕ ಸಮಾರಂಭಕ್ಕೆ ತಾಲ್ಲೂಕಿನ ಒಕ್ಕಲಿಗರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಿಲ್ಲ, ಜಿಲ್ಲಾ ಸಂಘದ ಪದಾಧಿಕಾರಿಗಳಿಗೂ ಮಾಹಿತಿ ನೀಡದೆ ರಥಯಾತ್ರೆಯನ್ನು ಬಿಜೆಪಿ ಕಾರ್ಯಕ್ರಮದಂತೆ ನಡೆಸಲಾಗುತ್ತಿದೆ’ ಕಿಡಿಕಾರಿದರು.

‘ರಥದಲ್ಲಿ ಒಕ್ಕಲಿಗರ ಸಮಾಜದ ಸ್ವಾಮೀಜಿಗಳ ಭಾವಚಿತ್ರ ಹಾಕದೆ ಕೇವಲ ಬಿಜೆಪಿ ನಾಯಕರ ಭಾವಚಿತ್ರ ಮಾತ್ರ ಅಳವಡಿಸಲಾಗಿದೆ. ಇದು ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅಪಮಾನ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ADVERTISEMENT

‘ರಥಯಾತ್ರೆ ಮೂಲಕ ಸರ್ಕಾರದ ಹಣದಲ್ಲಿ ಬಿಜೆಪಿಯವರು ತಮ್ಮ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾವಚಿತ್ರ ಹಾಕಲಾಗಿದೆ. ಆದರೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಮತ್ತು ಸಿದ್ದರಾಮಯ್ಯ ಅವರ ಭಾವಚಿತ್ರ ಹಾಕಿಲ್ಲ. ಈ ಭಾಗದ ಸಂಸದ ಬಿ.ಎನ್. ಬಚ್ಚೇಗೌಡ ಅವರ ಭಾವಚಿತ್ರ ಕೂಡ ಕಾಣುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮವನ್ನು ತಾವು ಉದ್ಘಾಟಿಸುವುದಿಲ್ಲ ಎಂದು ಪ್ರತಿಭಟಿಸಿದರು.

ಸರ್ಕಾರದ ವಿರುದ್ಧ ಘೋಷಣೆ: ಈ ಸ್ಥಳಕ್ಕೆ ಆಗಮಿಸಿದ ಸಚಿವ ಎಂ.ಟಿ.ಬಿ ನಾಗರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಶರತ್ ಬಚ್ಚೇಗೌಡ ಮತ್ತು ಅವರ ಬೆಂಬಲಿಗರು ಕಾರ್ಯಕ್ರಮ ಬಹಿಷ್ಕರಿಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.