ADVERTISEMENT

ಹೊಸಕೋಟೆ ವಿಧಾನಸಭಾ ಕ್ಷೇತ್ರ: ಗುಟ್ಟು ಬಿಡದ ಶಾಸಕ ಶರತ್ ಬಚ್ಚೇಗೌಡ!

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಮತದಾರರು, ಕಾರ್ಯಕರ್ತರಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 4:33 IST
Last Updated 15 ಅಕ್ಟೋಬರ್ 2020, 4:33 IST
ಶರತ್ ಬಚ್ಚೇಗೌಡ
ಶರತ್ ಬಚ್ಚೇಗೌಡ   

ಹೊಸಕೋಟೆ: ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಯು ತಾಲ್ಲೂಕಿನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಸೇರಿದಂತೆ ಮತದಾರರಲ್ಲೂ ಗೊಂದಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಶರತ್ ಬಚ್ಚೇಗೌಡ ಅವರನ್ನು ಕೇಳಿದರೆ ‘ನಾನು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ’ ಎಂಬ ಸಿದ್ಧ ಉತ್ತರ ನೀಡುತ್ತಾರೆ. ನಿನ್ನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕರೆದಿದ್ದ ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಮುಖಂಡರೂ ಭಾಗವಹಿಸಿಲ್ಲ. ಹಾಗಾಗಿ, ಬಹುತೇಕ ಮುಖಂಡರಿಗೆ ಶಾಸಕರ ಮುಂದಿನ ನಿರ್ಧಾರದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಂತಾಗಿದೆ.

ಬಚ್ಚೇಗೌಡರ ಬೆಂಡಗಾನಹಳ್ಳಿ ಕುಟುಂಬವನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ಮುಖಂಡರಿಗೆ ಈಗ ಶರತ್ ಬಚ್ಚೇಗೌಡ ಕೈ ಪಾಳಯ ಸೇರುತ್ತಿರುವುದು ಇಷ್ಟವಿಲ್ಲ ಎನ್ನಲಾಗಿದೆ. ತಾಲ್ಲೂಕಿನಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಹೊಡೆದಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಎದುರಿಸಿರುವ ಮುಖಂಡರು ಈಗ ಶರತ್ ಬಚ್ಚೇಗೌಡರನ್ನು ಒಪ್ಪುವುದು ಕಷ್ಟ.

ADVERTISEMENT

ಹಾಗೆಯೇ ಬಚ್ಚೇಗೌಡರ ಕಾಲದಿಂದಲೂ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿರುವ ಮುಖಂಡರು ಈಗ ಅದೇ ಪಕ್ಷದ ಬಾವುಟ ಹಿಡಿಯಲು ಹಿಂದುಮುಂದು ನೋಡುತ್ತಿರುವುದು ಉಂಟು. ವಿಧಾನಸಭಾ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಅವರು ಗೆಲ್ಲಲು ಕಾರಣರಾದ ಕೆಲವು ಯುವಕರಿಗೆ ಶಾಸಕರು ಮತ್ತೆ ಬಿಜೆಪಿಗೆ ಬಂದೇ ಬರುತ್ತಾರೆ ಎಂಬ ವಿಶ್ವಾಸವಿತ್ತು. ಅವರ ಪರವಾಗಿ ನಾವು ಕೆಲಸ ಮಾಡಿದ್ದೇವೆ. ಈಗ ಅವರು ಕಾಂಗ್ರೆಸ್ ಸೇರಿದರೆ ನಾವು ಹೇಗೆ ಅವರ ಜೊತೆ ಹೋಗುವುದು ಎಂದು ಪ್ರಶ್ನಿಸುತ್ತಾರೆ.

ಆದರೆ, ಶರತ್ ಬಚ್ಚೇಗೌಡರ ಕೆಲವು ಹಿಂಬಾಲಕರು ಮಾತ್ರ ಶಾಸಕರ ನಿಲುವಿನಂತೆ ನಾವು ಕೆಲಸ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಕೆಲವು ಹಿರಿಯ ಮುಖಂಡರು ತಮಗೆ ರಾಜಕೀಯ ಸಾಕು, ಮನೆಯಲ್ಲಿಯೇ ಇರುವುದು ಉತ್ತಮ ಎಂಬ ನಿಲುವನ್ನೂ ಹೊಂದಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ತಾಲ್ಲೂಕಿನ ಪದಾಧಿಕಾರಿಗಳ ತೀರ್ಮಾನದಂತೆ ಮುಂದಿನ ಹೆಚ್ಚೆ ಇಡಲು ನಿರ್ಧರಿಸಲಾಗಿದೆ. ಇದೇ 19ರಂದು ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಪಡೆಯಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಶಾಸಕರನ್ನು ಸೇರಿಸಿಕೊಳ್ಳಲು ಕಾಂಗ್ರೆಸ್ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲವಾದರೂ ಗ್ರಾಮ ಪಂಚಾಯಿತಿ ಚುನಾವಣೆಗೂ ಮೊದಲು ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಬೇಕು. ಇದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ಆ ಪಕ್ಷದ ಕೆಲವು ಮುಖಂಡರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.