
ಚಂದಾಪುರ (ಆನೇಕಲ್): ಚಂದಾಪುರದಲ್ಲಿ ಬಿ.ಶಿವಣ್ಣ ಆಪ್ತ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಕೊಕ್ಕೋ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರು ಪಯೋನಿಯರ್ಸ್ ತಂಡ ಜಯ ಸಾಧಿಸಿದೆ. ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆಯ ಕುರಬೂರು ತಂಡ ಜಯಗಳಿಸಿದೆ.
ಭಾನುವಾರ ರಾತ್ರಿ 11ರ ಸುಮಾರಿಗೆ ಕೊಕ್ಕೊ ಅಂತಿಮ ಪಂದ್ಯಗಳು ನಡೆದವು. ಬಾಲಕರ ವಿಭಾಗದಲ್ಲಿ ಬೆಂಗಳೂರು ಪಯೋನಿಯರ್ಸ್ ಮತ್ತು ಬೆಂಗಳೂರು ವಿಜಯನಗರದ ಯಂಗ್ ಪಯೋನಿಯರ್ಸ್ ತಂಡಗಳು ಮುಖಾಮುಖಿಯಾದರು. ಅಂತಿಮ ಹಣಾಹಣಿಯಲ್ಲಿ ಬೆಂಗಳೂರು ಪಯೋನಿಯರ್ಸ್ ತಂಡವು ಜಯಗಳಿಸಿತು. ₹50ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು. ರನ್ನರ್ ಅಪ್ ತಂಡಕ್ಕೆ ₹30 ಸಾವಿರ ನಗದು ಮತ್ತು ಟ್ರೋಫಿ ನೀಡಲಾಯಿತು. ಮೈಸೂರು ಮತ್ತು ಚಾಲುಕ್ಯ ಸ್ಪೋರ್ಟ್ಸ್ ಕ್ಲಬ್ ಕ್ರಮವಾಗಿ ಮೂರು, ನಾಲ್ಕನೇ ಸ್ಥಾನದೊಂದಿಗೆ ತಲಾ ₹15 ಸಾವಿರ ನಗದು ಬಹುಮಾನ ಪಡೆದುಕೊಂಡವು.
ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆ ಕಾವೇರಿ ಕಪಿಲಾ ಸ್ಪೊರ್ಟ್ಸ್ ಕ್ಲಬ್ ಕುರುಬೂರು ತಂಡ ಹಾಗೂ ಬಿಸಿವೈಸಿ ಬೆಂಗಳೂರು ತಂಡ ಮುಖಮುಖಿಯಾಗಿದ್ದವು. ರೋಚಕ ಸೆಣಸಾಟದಿಂದ ಜಯ ಸಾಧಿಸಿದ ಮೈಸೂರು ತಂಡವು ₹50 ಸಾವಿರ ನಗದು ಹಾಗೂ ಟ್ರೋಫಿಯನ್ನು ಮೂಡಿಗೇರಿಸಿಕೊಂಡಿತು.
ರನ್ನರ್ ಅಪ್ ಬಿಸಿವೈಸಿ ಬೆಂಗಳೂರು ತಂಡಕಕೆ ₹30 ಸಾವಿರ ನಗದು, ಮೈಸೂರು ಚಾಮುಂಡೇಶ್ವರಿ ಸ್ಪೋರ್ಟ್ಸ್ ಕ್ಲಬ್ ಮತ್ತು ರಾಯಚೂರು ತಂಡ ಮೂರು, ನಾಲ್ಕನೇ ಸ್ಥಾನದೊಂದಿಗೆ ತಲಾ ₹15 ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡವು.
ಪಂದ್ಯಾವಳಿಯಲ್ಲಿ ಕೋಲಾರ, ಚಿತ್ರದುರ್ಗ, ರಾಯಚೂರು, ತುಮಕೂರು, ಬೆಂಗಳೂರು, ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 39ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಚಂದಾಪುರ ಸೂರ್ಯಸಿಟಿಯಲ್ಲಿ ಕಳೆದ ಎರಡು ದಿನಗಳಿಂದ ಕೊಕ್ಕೊ ಪಂದ್ಯಾವಳಿ ಹಬ್ಬದಂತೆ ನಡೆಯಿತು. ವಿದ್ಯುತ್ ದೀಪಗಳ ಝಗಮಗಿಸುವ ಅಂಕಣಗಳಲ್ಲಿ ಕೊಕ್ಕೊ ಪಂದ್ಯಾವಳಿ ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಆಪ್ತ ಬಳಗದ ಬನಹಳ್ಳಿ ಅಭಿ, ಮುಖಂಡರಾದ ಬೊಮ್ಮಸಂದ್ರ ಗೋಪಾಲ್, ಶ್ರೀನಿವಾಸ್, ಪುಷ್ಪರಾಜು, ಸೂರ್ಯಸಿಟಿ ಮುರಳಿ, ಭೈರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.