
ಆನೇಕಲ್: ತಾಲ್ಲೂಕಿನ ಜಿಗಣಿ ಸಮೀಪದ ಹರಪನಹಳ್ಳಿ ಬೃಂದಾವನ ಶಾಲೆ ಆವರಣದಲ್ಲಿ ಡಿ.23ರಿಂದ 25ರವರೆಗೆ ಹಿರಿಯ ಮಹಿಳಾ ವಿಭಾಗದ ಹೊನಲು ಬೆಳಕಿನ ರಾಜ್ಯಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ -2025 ನಡೆಯಲಿದೆ ಎಂದು ಬೃಂದಾವನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಬಿ.ಎಲ್.ಶೇಖರ್ ತಿಳಿಸಿದರು.
ತಾಲ್ಲೂಕಿನ ಜಿಗಣಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಪುರುಷರ ಕಬಡ್ಡಿ ಪಂದ್ಯಾವಳಿ ಹೆಚ್ಚು ಆಯೋಜಿಸಲಾಗುತ್ತಿದೆ. ಮಹಿಳೆಯರ ಕಬಡ್ಡಿಗೆ ಪ್ರೋತ್ಸಾಹ ನೀಡಬೇಕು. ದಕ್ಷಿಣ ಭಾರತದಿಂದ ಹೆಚ್ಚು ಮಂದಿ ಮಹಿಳಾ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕು ಎಂಬ ನಿಟ್ಟಿನಲ್ಲಿ ಶಾಲೆಯಲ್ಲಿ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಅರ್ಜುನ ಪ್ರಶಸ್ತಿ ಪುರಸ್ಕೃತರು ಮತ್ತು ಕಬಡ್ಡಿ ಆಟಗಾರರಾದ ಬಿ.ಸಿ ರಮೇಶ್ ಮತ್ತು ಮಮತಾ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.
ಬೃಂದಾವನ ಶಿಕ್ಷಣ ಸಂಸ್ಥೆಗಳ ಪುಷ್ಪಲತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ತಂಡಗಳಲ್ಲಿ ಕರ್ನಾಟಕದ ಆಟಗಾರರು ಕಡಿಮೆಯಾಗುತ್ತಿದ್ದಾರೆ. ಕಬಡ್ಡಿ ಪಂದ್ಯಗಳಲ್ಲಿ ಕರ್ನಾಟಕ ಆಟಗಾರರು ಹೆಚ್ಚಾಗಬೇಕು ಮತ್ತು ಮಹಿಳೆಯರಿಗೂ ಪ್ರೊಕಬಡ್ಡಿ ಆಯೋಜಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ಶಾಲೆ ಸಿಇಒ ಕಿಶೋರ್ ಶರ್ಮಾ, ಡಿ.ರಾಜಣ್ಣ, ಪ್ರದೀಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.