ADVERTISEMENT

ಶಿವಕುಮಾರ ಸ್ವಾಮೀಜಿ ಪ್ರತಿಮೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 12:54 IST
Last Updated 29 ಜನವರಿ 2019, 12:54 IST
ಬೂದಿಗೆರೆ ಗ್ರಾಮದ ಸಿದ್ಧಗಂಗಾ ಕಾಲೇಜಿನ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ಸಭೆ ಸೇರಿ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ನಿರ್ಮಾಣದ ಕುರಿತು ಚರ್ಚಿಸಿದರು
ಬೂದಿಗೆರೆ ಗ್ರಾಮದ ಸಿದ್ಧಗಂಗಾ ಕಾಲೇಜಿನ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ಸಭೆ ಸೇರಿ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ನಿರ್ಮಾಣದ ಕುರಿತು ಚರ್ಚಿಸಿದರು   

ವಿಜಯಪುರ: ಸಿದ್ಧಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಮುಂದಿನ ಪೀಳಿಗೆಗೆ ತಿಳಿವಳಿಕೆ ನೀಡಬೇಕು ಎಂದು ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಶ್ರೀನಿವಾಸಗೌಡ ಹೇಳಿದರು.

ಬೂದಿಗೆರೆ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಶಿವಕುಮಾರ ಸ್ವಾಮೀಜಿ ಅವರು ಸ್ಥಾಪನೆ ಮಾಡಿರುವ ಈ ಕಾಲೇಜಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂದು ಕಾಲೇಜು ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಅವರ ಆಶೀರ್ವಾದವೇ ಮೂಲ ಕಾರಣವಾಗಿದೆ ಎಂದರು.

ADVERTISEMENT

ಅವರ ನೆನಪಿಗಾಗಿ ಪ್ರತಿಮೆ ನಿರ್ಮಾಣ ಮಾಡಲು ಹಳೆಯ ವಿದ್ಯಾರ್ಥಿಗಳ ಸಂಘವನ್ನು ಆರಂಭಿಸಿ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.

ಮುಖಂಡ ಪ್ರಭಾಕರ್ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರ ಸೇವೆ ಅನನ್ಯವಾದುದು. ರಾಜ್ಯದಲ್ಲಿ ಅವರು ಮಾಡಿರುವ ಶಿಕ್ಷಣ ಕ್ರಾಂತಿ ದ್ವಿಗುಣವಾಗಬೇಕು ಎಂದರು.

ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದರ ಜೊತೆಗೆ ಸ್ವಾಮೀಜಿಗಳ ಸೇವೆಯನ್ನು ಎಲ್ಲರಿಗೂ ಪರಿಚಯಿಸಲು ಉತ್ತಮವಾದ ಪ್ರತಿಮೆ ನಿರ್ಮಾಣ ಮಾಡಿಸಿ ಪ್ರತಿಷ್ಠಾಪನೆ ಹಾಗೂ ನಿರ್ವಹಣೆಯ ಕುರಿತು ಸೂಕ್ತ ಕ್ರಮಗಳನ್ನು ಕೈಗೊಂಡು ಯುವಜನರನ್ನು ಸಂಘಟಿಸಬೇಕಾಗಿದೆ ಎಂದರು.

ಬೂದಿಗೆರೆ ಗ್ರಾಮ ಪಂಚಾಯಿತಿ ಸದಸ್ಯರು, ಸಿದ್ದಗಂಗಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಅರೆಬನ್ನಿಮಂಗಲ, ಚೌಡಪ್ಪನಹಳ್ಳಿ, ಗಂಗವಾರ, ಮಂಡೂರು, ಜ್ಯೋತಿಪುರ, ಹಿತ್ತರಹಳ್ಳಿ, ಅಂದರಹಳ್ಳಿ, ಕಗ್ಗಲಹಳ್ಳಿ, ಕೊಂಡೇನಹಳ್ಳಿ, ಭಟ್ಟರಮಾರೇನಹಳ್ಳಿ, ಸೋಮತ್ತನಹಳ್ಳಿ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.