
ದೊಡ್ಡಬಳ್ಳಾಪುರ: ಒಳಚರಂಡಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಮುಖ್ಯಮಂತ್ರಿಯಿಂದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ತಾಲ್ಲೂಕು ಕಚೇರಿ ಮುಂದೆ ಮೂರು ದಿನಗಳಿಂದ ನಡೆಯುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹ ಶನಿವಾರ ಮಧ್ಯಾಹ್ನ ತಹಶೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಅವರು ಸತ್ಯಾಗ್ರಹಿಗಳಿಗೆ ಎಳನೀರು ಕುಡಿಸುವ ಮೂಲಕ ಅಂತ್ಯಗೊಳಿಸಿದರು.
ಒಳಚರಂಡಿ ನೀರು ಶುದ್ಧೀಕರಿಸಿ ಬಿಡುವ ಸಲುವಾಗಿ ಎಸ್‌ಟಿಪಿ ಘಟಕ ಸ್ಥಾಪಿಸಬೇಕೆಂದು ಒತ್ತಾಯಿಸಿ ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣೆ ವೇದಿಕೆ ಹಾಗೂ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಕೆರೆ ಹೋರಾಟ ಸಮಿತಿ ನೇತೃತ್ವದಲ್ಲಿ ಮೂರು ದಿನಗಳಿಂದ ತಾಲ್ಲೂಕು ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿತ್ತು. ಶುಕ್ರವಾರ ರಾತ್ರಿ ಅಸ್ವಸ್ಥರಾಗಿದ್ದ ಹೋರಾಟಗಾರರಿಗೆ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ‘ನಮಗೆ ಇಲ್ಲಿನ ಯಾವುದೇ ಅಧಿಕಾರಿಗಳ ಭರವಸೆ ಬೇಡ. ಎಸ್‌ಟಿಪಿ ಘಟಕಕ್ಕೆ ₹57ಕೋಟಿ ಮಂಜೂರು ಮಾಡುವ ಸರ್ಕಾರದ ಕಾರ್ಯದರ್ಶಿ ಇಲ್ಲಿಗೆ ಬಂದು ಉತ್ತರ ನೀಡುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಉಪವಾಸ ಕೈಬಿಡಿ ಎಂದು ಭರವಸೆ ನೀಡಲು ಬಂದ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಪ್ರತ್ಯುತ್ತರ ನೀಡಿದ್ದರು.
ಈ ಬಗ್ಗೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಹೋರಾಟಗಾರರಾದ ಸತೀಶ್, ಪ್ರಸನ್ನ, ಟಿ.ಜಿ.ಮಂಜುನಾಥ್, ರಾಮಕೃಷ್ಣ, ಆದಿತ್ಯನಾಗೇಶ್ ಅವರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಬೆಳಗ್ಗೆ ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದರು.
ತಹಶೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಧರಣಿ ನಿರತರಿಗೆ ಮಾಹಿತಿ ನೀಡಿ, ಎಸ್‌ಟಿಪಿ ಕಾಮಗಾರಿ ಅಂದಾಜು ಯೋಜನಾ ವೆಚ್ಚದ ಕುರಿತಾಗಿ ವರದಿ ಸಲ್ಲಿಸಲಾಗಿದೆ. ಅನುದಾನಕ್ಕೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗೆ ಉಸ್ತುವಾರಿ ಸಚಿವ, ಶಾಸಕರು, ಮಾಜಿ ಶಾಸಕರು ಹಾಗೂ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ತುರ್ತಾಗಿ ಹುಬ್ಬಳ್ಳಿಗೆ ಹೋಗಬೇಕಾಗಿರುವುದರಿಂದ ಮಂಗಳವಾರ ಸಭೆ ನಡೆಸುತ್ತೇನೆ. ಉಪವಾಸ ಸತ್ಯಾಗ್ರಹ ಕೈಬಿಡಲು ಹೇಳಿ ಎಂದು ತಿಳಿಸಿದ್ದಾರೆ. ಮುಂದೆ ನಡೆಯುವ ಮುಖ್ಯಮಂತ್ರಿ ಸಭೆಯಲ್ಲಿ ಹೋರಾಟಗಾರರು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಪೌರಾಯುಕ್ತ ಆರ್.ಕಾರ್ತಿಕೇಶ್ವರ ಮಾತನಾಡಿ, ಎಸ್‌ಟಿಪಿ ಘಟಕ ಸ್ಥಾಪನೆ ಅನುದಾನ ಬಂದರೆ ಎಲ್ಲ ಸಮಸ್ಯೆಗೆ ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಭೇಟಿ ಫಲಪ್ರದವಾಗಿದೆ. ಇಲ್ಲಿನ ವಿದ್ಯಮಾನ, ಸತ್ಯಾಗ್ರಹ ಕುರಿತ ಪತ್ರಿಕಾ ವರದಿಗಳನ್ನು ಮುಖ್ಯಮಂತ್ರಿಗೆ ತಿಳಿಸಿ ಮನವರಿಕೆ ಮಾಡಿಕೊಡಲಾಗಿದೆ. ಮುಖ್ಯಮಂತ್ರಿ ಮಂಗಳವಾರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಉಪವಾಸ ಅಂತ್ಯ
ನಗರಸಭೆ ಅನುದಾನವನ್ನು ಘಟಕ ಸ್ಥಾಪನೆ ಜಮೀಜು ಖರೀದಿಗೆ ಬಳಸಬೇಕು. ಹೆಚ್ಚುವರಿ ಅನುದಾನ ಎಸ್‌ಟಿಪಿ ಘಟಕ ಸ್ಥಾಪನೆಗೆ ವಿನಿಯೋಗಿಸಬೇಕು. ಮುಖ್ಯಮಂತ್ರಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಹೋರಾಟ ಹಿಂಪಡೆಯುತ್ತೇವೆ ಎಂದು ಹೋರಾಟಗರರು ಸತ್ಯಾಗ್ರಹ ಅಂತ್ಯಗೊಳಿಸಿದರು. ಈ ಸಂದರ್ಭದಲ್ಲಿ ಕೆರೆ ಹೋರಾಟ ಸಮಿತಿ ಮುಖಂಡರಾದ ರಮೇಶ್ ವಸಂತಕುಮಾರ್ ಕಾಳೇಗೌಡ ಟಿ.ಕೆ.ಹನುಮಂತರಾಜು ಇದ್ದರು.