ADVERTISEMENT

ವಿದ್ಯಾರ್ಥಿ ನಿರ್ಮಿತ ಉಪಗ್ರಹ ಉಡಾವಣೆ: ಇಸ್ರೋ ವಿಜ್ಞಾನಿ ಪ್ರೊ.ಆರ್‌.ಎಂ. ವಾಸಗಂ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 6:02 IST
Last Updated 30 ನವೆಂಬರ್ 2021, 6:02 IST
ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಎನ್‌ಟಿಟಿಎಫ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪಗ್ರಹಗಳ ಬಗ್ಗೆ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಇಸ್ರೋ ವಿಜ್ಞಾನಿ ಪ್ರೊ.ಆರ್.ಎಂ. ವಾಸಗಂ ಪ್ರಮಾಣ ಪತ್ರ ವಿತರಿಸಿದರು
ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಎನ್‌ಟಿಟಿಎಫ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪಗ್ರಹಗಳ ಬಗ್ಗೆ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಇಸ್ರೋ ವಿಜ್ಞಾನಿ ಪ್ರೊ.ಆರ್.ಎಂ. ವಾಸಗಂ ಪ್ರಮಾಣ ಪತ್ರ ವಿತರಿಸಿದರು   

ಆನೇಕಲ್: ‘ಯುವ ಸಮುದಾಯ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ದೇಶಕ್ಕೆ ಕೊಡುಗೆ ನೀಡಬೇಕು. ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು’ ಎಂದುಇಸ್ರೋ ವಿಜ್ಞಾನಿ ಪ್ರೊ.ಆರ್‌.ಎಂ. ವಾಸಗಂ ಕಿವಿಮಾತು ಹೇಳಿದರು.

ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಎನ್‌ಟಿಟಿಎಫ್‌ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡ್ರೋನ್‌ ಮತ್ತು ಉಪಗ್ರಹಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಇದರಿಂದಾಗಿ ಹೊಸ ವಿಷಯಗಳು ತಿಳಿಯುತ್ತವೆ. ಸ್ವಾತಂತ್ರ್ಯೋತ್ಸವಕ್ಕೆ 75 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿ 75 ವಿದ್ಯಾರ್ಥಿ ಉಪಗ್ರಹಗಳು ಮತ್ತು ಡ್ರೋನ್‌ ಸಿದ್ಧಪಡಿಸಿ ಉಡಾವಣೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದರು.

ADVERTISEMENT

ಈ ಕಾಲೇಜುಗಳಲ್ಲಿ ಎನ್‌ಟಿಟಿಎಫ್‌ ಕಾಲೇಜು ಸಹ ಒಂದಾಗಿದ್ದು, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿವೆ ಎಂದು ಹೇಳಿದರು.

ಉಪಗ್ರಹಗಳಿಂದಾಗಿ ಹವಾಮಾನ, ಮಾಹಿತಿ ತಂತ್ರಜ್ಞಾನ ಮತ್ತು ದೂರ ಸಂಪರ್ಕ ವಿಭಾಗಗಳಿಗೆ ಹೆಚ್ಚಿನ ಕೊಡುಗೆ ನೀಡಲಿದೆ. ಬಾಹ್ಯಾಕಾಶ ವಿಭಾಗವು ಅತ್ಯಂತ ಪ್ರಬಲ ಕ್ಷೇತ್ರವಾಗಿದ್ದು, ಸಮಾಜಕ್ಕೆ ಅನುಕೂಲವಾಗುವ ಉಪಗ್ರಹಗಳ ಅವಶ್ಯಕತೆಯಿದೆ. ರೈತರಿಗೆ ಅನುಕೂಲವಾಗುವ ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎನ್‌ಟಿಟಿಎಫ್‌ ಕಾಲೇಜಿನ ಬಿ.ವಿ. ಸುದರ್ಶನ್‌ ಮಾತನಾಡಿ ಉಪಗ್ರಹ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಸಲುವಾಗಿ ಶಿಬಿರ ಆಯೋಜಿಸಲಾಗಿದೆ ಎಂದರು.

ವಿದ್ಯಾರ್ಥಿಗಳೇ ತಯಾರಿಸಿರುವ ಉಪಗ್ರಹಕ್ಕೆ ಚಾಲನೆ ನೀಡಲಾಗಿದ್ದು, ಈ ಉಪಗ್ರಹವು 100 ಮೀಟರ್‌ ಹಾರಿ ವಿವಿಧ ದತ್ತಾಂಶಗಳನ್ನು ಸಂಗ್ರಹಿಸಿದೆ. ಇಂಡಿಯನ್‌ ಟೆಕ್ನಾಲಜಿ ಕಾಂಗ್ರೆಸ್‌ ಅಸೋಸಿಯೇಷನ್‌ ಸೇರಿದಂತೆ ವಿವಿಧ ಸಂಸ್ಥೆಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.

ಎನ್‌ಟಿಟಿಎಫ್‌ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌. ರೇಗುರಾಜ್‌, ಆಡಳಿತ ಮಂಡಳಿಯ ಆರ್‌. ರಾಜಗೋಪಾಲನ್‌, ಡಾ.ಕೆ. ಗೋಪಾಲಕೃಷ್ಣನ್‌, ಡಾ.ವುಡಯ್‌ ಪಿ. ಕೃಷ್ಣ, ಇಂಡಿಯನ್‌ ಟೆಕ್ನಾಲಜಿ ಕಾಂಗ್ರೆಸ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ.ಎಲ್‌.ವಿ. ಮುರುಳಿಕೃಷ್ಣರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.