ADVERTISEMENT

ಬೇಸಿಗೆಯ ಬೇಗೆ: ಬನ್ನೇರುಘಟ್ಟ ಪ್ರಾಣಿಗಳಿಗೆ ಐಸ್‌ಕ್ಯಾಂಡಿ, ಲಾಲಿಪಾಪ್‌!

ಬೇಸಿಗೆ ಬೇಗೆ ತಣಿಸಲು ಕೆಸರಿನ ಹೊಂಡ । ಕೃತಕ ಜಲಪಾತದಲ್ಲಿ ಜಲಕ್ರೀಡೆ । ಸ್ಪ್ರಿಂಕ್ಲರ್‌ ಮೂಲಕ ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 22:17 IST
Last Updated 4 ಏಪ್ರಿಲ್ 2025, 22:17 IST
<div class="paragraphs"><p> ಕಲ್ಲಂಗಡಿ ಹಣ್ಣು ಸೇವಿಸುತ್ತಿರುವ ಆನೆ</p></div>

ಕಲ್ಲಂಗಡಿ ಹಣ್ಣು ಸೇವಿಸುತ್ತಿರುವ ಆನೆ

   

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬೇಸಿಗೆಯ ಬೇಗೆ ತಣಿಸಲು ಪ್ರಾಣಿಗಳಿಗೆ ಹಣ್ಣಿನಿಂದ ತಯಾರಿಸಿದ ಐಸ್‌ಕ್ಯಾಂಡಿ ನೀಡಲಾಗುತ್ತಿದೆ. ಬಿಸಿಲಿನ ಬೇಗೆಗೆ ವನ್ಯಪ್ರಾಣಿಗಳು ನಿರ್ಜಲೀಕರಣ ಆಗದಂತೆ ಆಹಾರದ ಮೂಲಕ ಪುಷ್ಟೀಕರಣ ನೀಡಲಾಗುತ್ತಿದೆ. ಅಲ್ಲದೆ ಉದ್ಯಾನದ ಹೊಂಡಗಳಲ್ಲಿ ನೀರು ತುಂಬಿಸಿ ಪ್ರಾಣಿಗಳು ಜಲಕ್ರೀಡೆ ಆಡಲು ಅನುಕೂಲಕರ ವಾತಾವರಣ ಸೃಷ್ಟಿಸಲಾಗಿದೆ.

ಬಿರು ಬೇಸಿಗೆಯಲ್ಲಿ ಪ್ರಾಣಿಗಳು ತಂಪು ವಾತಾವರಣ ಬಯಸುತ್ತವೆ. ಹಾಗಾಗಿ ಸ್ಪ್ರಿಂಕ್ಲರ್‌ ಮೂಲಕ ಸಿಂಪಡಿಸಲಾಗುತ್ತಿದೆ. ಕೆಲವು ಪ್ರಾಣಿಗಳು ಕೆಸರಿನಲ್ಲಿರಲು ಇಚ್ಛಿಸುತ್ತವೆ. ಹೀಗಾಗಿ ಹೊಂಡ ಸಿದ್ಧಪಡಿಸಿದ್ದು ಅಲ್ಲಿ ಸಮಯ ಕಳೆಯುತ್ತವೆ. ತರಕಾರಿಗಳು, ಹಣ್ಣುಗಳನ್ನು ಬಳಸಿ ಲಾಲಿಪಾಪ್‌ ಮತ್ತು ಐಸ್‌ಕ್ಯಾಂಡಿ ನೀಡಲಾಗುತ್ತಿದೆ.

ADVERTISEMENT

ಪ್ರಾಣಿಗಳು ತಮ್ಮ ಬುದ್ಧಿಶಕ್ತಿಯನ್ನು ಬಳಸಿ ಇವುಗಳನ್ನು ಸೇವಿಸುವ ಮೂಲಕ ಜೊತೆಗೆ ಬೇಸಿಗೆಯಲ್ಲಿ ತಂಪಾಗಿರಲು ವ್ಯವಸ್ಥೆ ಮಾಡಲಾಗಿದೆ ಎಂದು ಉದ್ಯಾನದ ಬಯೋಲಾಜಿಸ್ಟ್‌ ಐಶ್ವರ್ಯ ತಿಳಿಸಿದರು.

ತಾಲ್ಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಬೇಸಿಗೆಯ ಬೇಗೆ ಹೆಚ್ಚಾಗಿದೆ. 38-40ಡಿಗ್ರಿ ತಾಪಾಮಾನವಿದೆ. ಇದರಿಂದ ಪಾರು ಮಾಡಲು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿವಿಧ ಚಟುವಟಿಕೆ ರೂಪಿಸಲಾಗಿದೆ. ಮಂಗ, ಕರಡಿಗಳಿಗೆ ವಿಶೇಷ  ಆಹಾರ ನೀಡಲಾಗುತ್ತಿದೆ ಎಂದರು.

ಕಾಡಿನಲ್ಲಿರುವ ಪ್ರಾಣಿಗಳು ತೀವ್ರ ತಾಪಮಾನ ಸಹಿಸಿಕೊಳ್ಳಲು ಶಕ್ತಿ ಹೊಂದಿವೆ. ಆದರೆ ಮೃಗಾಲಯಗಳಲ್ಲಿರುವ ಪ್ರಾಣಿಗಳಿಗೆ ಆಗಲ್ಲ. ಹೀಗಾಗಿ ಪರಿಸರದಲ್ಲಿ ಋತುಮಾನಕ್ಕೆ ತಕ್ಕ ಬದಲಾವಣೆ ಮತ್ತು ಅವುಗಳ ನಿರ್ವಹಣೆ ಮಾಡಬೇಕು. ಪೌಷ್ಟಿಕಾಂಶ ಒದಗಿಸುವುದರಿಂದ ಮೃಗಾಲಯದಲ್ಲಿರುವ ಪ್ರಾಣಿಗಳ ಮಾನಸಿಕ ಮತ್ತು ದೈಹಿಕ ಚಟುವಟಿಕೆ ಸುಧಾರಿಸುತ್ತದೆ.  

ಮೃಗಾಲಯದ ಪ್ರಾಣಿಗಳು ಆರಾಮದಾಯಕ ಜೀವನ ನಡೆಸಲು ಅನುವು ಮಾಡಿಕೊಡಲಾಗಿದೆ. ಆಯಾ ಪ್ರಾಣಿಗಳಿಗೆ ಅನುಗುಣವಾದ ಬೇಸಿಗೆಯ ಪುಷ್ಟೀಕರಣವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇದೇನಿದು ಮರದಲ್ಲಿ ಹೊಸ ಹಣ್ಣು?....  ನರಿಗಳಿಗಾಗಿ ಮರದಲ್ಲಿ ಕಟ್ಟಿರುವ ಹಣ್ಣಿನ ಐಸ್‌ಕ್ಯಾಂಡಿ
ನಾನೊಬ್ನೆ ತಿಂದು ಮುಗಿಸುತ್ತೇನೆ.... ಹಣ್ಣಿನ ಐಸ್‌ಕ್ಯಾಂಡಿ ಸವಿಯುತ್ತಿರುವ ಕೋತಿ
ಒಳಗಡೆ ಏನಿರಬಹುದು?: ಹಣ್ಣು ತಿನ್ನುವ ಮುನ್ನ ಪರೀಕ್ಷಿಸುತ್ತಿರುವ ಕರಡಿ
ಎಲ್ಲಾ ಐಸ್‌ ಕ್ಯಾಂಡಿಗಾಗಿ ... ಮರದಲ್ಲಿ ನೇತು ಹಾಕಿರುವ ತರಕಾರಿ ಕ್ಯಾಂಡಿ ಸವಿಯುತ್ತಿರುವ ಕೋತಿ
ಕೆಸರು ಹೊಂಡದಲ್ಲಿ ಟರ್ಕಿ ಕೋಳಿಗಳ ಕುಟುಂಬದ ಜಲಕ್ರೀಡೆ 
ಆಹಾ.. ಎಂಥಾ ರುಚಿ... 
ಕ್ಯಾಂಡಿ ತಿನ್ನುವುದನ್ನು ಯಾರಾದರೂ ನೋಡುತ್ತಿದ್ದಾರಾ? 

ಪ್ರಾಣಿಗಳ ಜಲಕ್ರೀಡೆ

ಜಿರಾಫೆ ಹುಲಿಗಳನ್ನು ಇಟ್ಟಿರುವ ಪ್ರಾಣಿ ಸಂಗ್ರಹಾಲಯದ ಆವರಣಗಳಲ್ಲಿ ಸ್ಪ್ರಿಂಕ್ಲರ್‌ ಮೂಲಕ ನೀರು ಸಿಂಪಡಣೆ ಮತ್ತು ಬಿಸಿಲಿನಿಂದ ರಕ್ಷಿಸಲು ಶೆಲ್ಟರ್‌ ನಿರ್ಮಿಸಲಾಗಿದೆ. ನೀರುಕುದುರೆಗಳಿಗೆ ತಂಪಾದ ಕಲ್ಲಂಗಡಿ ಐಸ್ ಬ್ಲಾಕ್‌ಗಳು ಮತ್ತು ಹಣ್ಣು ನೀಡಲಾಗುತ್ತಿದೆ. ಕರಡಿ ಆವರಣದಲ್ಲಿ ಸ್ವಇಚ್ಛೆಯಿಂದ ಸ್ನಾನ ಮಾಡಿ ತಂಪಾಗಿಸಿಕೊಳ್ಳಲು ಕೃತಕ ಜಲಪಾತ ನಿರ್ಮಿಸಲಾಗಿದೆ. ಇಲ್ಲಿ ಪ್ರಾಣಿಗಳು ಜಲಕ್ರೀಡೆ ಆಡುತ್ತಿವೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಕರಡಿಗಳಿಗೆ ಮಿಶ್ರ ಹಣ್ಣು ಮತ್ತು ತರಕಾರಿಗಳ ಐಸ್ ಬ್ಲಾಕ್‌ ಮತ್ತು ಎಳನೀರು ನೀಡಲಾಗುತ್ತಿದೆ. ಕೋತಿಗಳಿಗೆ ಹೆಚ್ಚಿನ ತಾಪಮಾನದ ಸಮಯದಲ್ಲಿ ತಂಪಾಗಿರಿಸಲು ಹಣ್ಣುಗಳು ಮತ್ತು ತರಕಾರಿಗಳಿಂದ ಮಾಡಿದ ಐಸ್ ಕ್ಯಾಂಡಿ ಮತ್ತು ಬ್ಲಾಕ್‌ ನೀಡಲಾಗುತ್ತದೆ. ಥಾಮಿನ್ ಜಿಂಕೆ ಮತ್ತು ಎಮುಗಳಂತಹ ಇತರ ಜಾತಿಗಳ ಪ್ರಾಣಿ ಮತ್ತು ಪಕ್ಷಿಗಳ ಆವರಣದಲ್ಲಿ ಕೆಸರು ಗುಂಡಿ ಇದ್ದು ಅವುಗಳನ್ನು ತಂಪಾಗಿಡಲು ಅನುಕೂಲತೆ ಒದಗಿಸಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.