ADVERTISEMENT

ದೇವನಹಳ್ಳಿ: 14 ಸಾವಿರ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ

ದ್ವಿತೀಯ ಪಿಯು ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಣಿ* ಇಂದಿನಿಂದ ಮೂರು ದಿನ ಅವಧಿ

​ಪ್ರಜಾವಾಣಿ ವಾರ್ತೆ
Published 18 ಮೇ 2023, 6:22 IST
Last Updated 18 ಮೇ 2023, 6:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ದೇವನಹಳ್ಳಿ: ಹಾಜರಾತಿ ಕೊರತೆಯಿಂದಾಗಿ ಪದವಿ ಪೂರ್ವ (ಪಿಯು) ಪರೀಕ್ಷೆಯಿಂದ ವಂಚಿತರಾದ ರಾಜ್ಯದ ಒಟ್ಟು 14 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುವರ್ಣಾವಕಾಶ ಕಲ್ಪಿಸಿದೆ.  

ವಿದ್ಯಾರ್ಥಿಗಳ ಒಂದು ಶೈಕ್ಷಣಿಕ ವರ್ಷ ವ್ಯರ್ಥವಾಗುವುದನ್ನು ತಪ್ಪಿಸಲು ಮತ್ತು ಅವರ ಭವಿಷ್ಯದ ದೃಷ್ಟಿಯಿಂದ ಜೂನ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯು ಪೂರಕ ಪರೀಕ್ಷೆಯನ್ನು ಖಾಸಗಿ ಅಭ್ಯರ್ಥಿಗಳಾಗಿ ಬರೆಯಲು ಶಿಕ್ಷಣ ಇಲಾಖೆ ಅವಕಾಶ ನೀಡಿದೆ. 

ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು ಮೇ 18ರಿಂದ ಮೇ 20ರೊಳಗೆ ಕಾಲೇಜಿನ ಮೂಲಕ ಪೂರಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ 14 ಸಾವಿರ ವಿದ್ಯಾರ್ಥಿಗಳ ಒಂದು ವರ್ಷದ ಶೈಕ್ಷಣಿಕ ಅವಧಿ ವ್ಯರ್ಥವಾಗುವುದು ತ‍ಪ್ಪಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ. 

ADVERTISEMENT

ಕನಿಷ್ಠ ಶೇ 75ರಷ್ಟು ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಶಿಕ್ಷಣ ಇಲಾಖೆಯ ನಿಯಮಾವಳಿಗಳ ಪ್ರಕಾರ ಜೂನ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಗೂ ನೋಂದಣಿ ಮಾಡಿಕೊಳ್ಳಲು  ಅವಕಾಶವಿಲ್ಲ.

ಅಂಥ ವಿದ್ಯಾರ್ಥಿಗಳು 2023–24ನೇ ಸಾಲಿಗೆ ಮತ್ತೊಮ್ಮೆ ಎರಡನೇ ವರ್ಷದ ಪಿಯುಗೆ ಹೊಸದಾಗಿ ಪ್ರವೇಶ ಪಡೆದು 2024ರಲ್ಲಿ ನಡೆಯುವ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಬೇಕಿತ್ತು. ಇದರಿಂದ 14 ಸಾವಿರ ವಿದ್ಯಾರ್ಥಿಗಳ ಒಂದು ವರ್ಷದ ಶೈಕ್ಷಣಿಕ ಅವಧಿ ವ್ಯರ್ಥವಾಗುವ ಸಾಧ್ಯತೆ ಇತ್ತು.  

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಇಲಾಖೆ ಇಂಥದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದೊಂದು ಉತ್ತಮ ಅವಕಾಶವಾಗಿದ್ದು, ಮುಂದಿನ ಮೂರು ದಿನದ ಒಳಗೆ ಪರೀಕ್ಷೆಗೆ ನೋಂದಣಿ ಮಾಡಿಕೊಂಡು ಅವಕಾಶದ ಸದುಪಯೋಗ ಪಡೆಯಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.