
ದೊಡ್ಡಬಳ್ಳಾಪುರ: ಸೂರತ್ ಸೀರೆಗಳನ್ನು ಇಲ್ಲಿ ತಂದು ಮಾರಾಟ ಮಾಡುವುದರಿಂದ ದೊಡ್ಡಬಳ್ಳಾಪುರ ನೇಯ್ಗೆ ಉದ್ಯಮದಲ್ಲಿ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸುವಂತೆ ಆಗ್ರಹಿಸಿ ನೇಕಾರರಿಂದ ಡಿಸೆಂಬರ್ ಅಂತ್ಯಕ್ಕೆ ದೊಡ್ಡಬಳ್ಳಾಪುರ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ನೇಕಾರರ ಹಿತರಕ್ಷಣಾ ಸಮಿತಿ ತಿಳಿಸಿದೆ.
ನಗರದಲ್ಲಿ ನೇಕಾರ ಸಂಘಟನೆಗಳು ಸೇರಿದಂತೆ ನಾನಾ ಪಕ್ಷಗಳಿಂದ ನಡೆದ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅನ್ಯ ರಾಜ್ಯಗಳ ಸೀರೆಗಳ ಮಾರಾಟದಿಂದ ದೊಡ್ಡಬಳ್ಳಾಪುರ ನೇಯ್ಗೆ ಉದ್ಯಮಕ್ಕೆ ಸಮಸ್ಯೆ ಎದುರಾಗುತ್ತಿದೆ. ನೇಕಾರರು ಸೂರತ್‌ನಿಂದ ದೊಡ್ಡಬಳ್ಳಾಪುರಕ್ಕೆ ಬಂದ ಸೀರೆಗಳ ಟ್ರಕ್‌ಗಳನ್ನು ತಡೆಯುವ ಮೂಲಕ ಇದು ನಮ್ಮ ಉದ್ಯಮಕ್ಕೆ ಮಾರಕ ಎಂಬ ಸಂದೇಶವನ್ನು ಸರ್ಕಾರಕ್ಕೆ ನೀಡಿದ್ದರು. ಜತೆಗೆ ಪ್ರತಿಭಟನೆ ಮಾಡಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಸಿಲ್ಲ. ಸಮಸ್ಯೆ ಹೆಚ್ಚುತ್ತಲೇ ಇದೆ ಎಂದು ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್ ಹೇಳಿದರು.
ಈ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಪ್ರಯತ್ನ ಮಾಡಲಾಗುವುದು. ಸಂಸದರು ದಿನಾಂಕ ತಿಳಿಸಿದ ಕೂಡಲೇ ನೇಕಾರರ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಬೇಕಾಗಿದೆ. ಡಿಸೆಂಬರ್ ಅಂತ್ಯದಲ್ಲಿ ದೊಡ್ಡಬಳ್ಳಾಪುರ ಬಂದ್‌ಗೆ ತೀರ್ಮಾನಿಸಲಾಗಿದ್ದು, ದಿನಾಂಕ ನಿಗದಿ ಪಡಿಸಲಾಗುವುದು ಎಂದರು.
‘ನೇಕಾರರ ಪರ ಸದಾ ಇರುತ್ತೇನೆ. ಯಾರು ಸೀರೆಗಳನ್ನು ತಂದು ಮಾರುತ್ತಾರೆ. ಅವರ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಸೋಣ. ಹೋರಾಟದಿಂದ ಮಾತ್ರ ಯಶಸ್ಸು ಸಾಧ್ಯ. ನಾನು ಹೋರಾಟದಲ್ಲಿ ಭಾಗಿಯಾಗುತ್ತೇನೆ. ಕಳೆದ ವಾರದಲ್ಲಿ ಜವಳಿ ಸಚಿವರೊಂದಿಗೆ ಸಭೆ ನಡೆಸಲಾಯಿತು. ದೊಡ್ಡಬಳ್ಳಾಪುರದ ಸೀರೆಗಳಿಗೆ ಜಿಐ ಮ್ಯಾನತೆ ಕೊಡಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ನಗರಸಭೆ ಸದಸ್ಯರಾದ ಟಿ.ಎನ್.ಪ್ರಭುದೇವ್, ಚಂದ್ರಮೋಹನ್, ಅಖಿಲೇಶ್, ಸಿಐಟಿಯು ರಾಜ್ಯ ಅಧ್ಯಕ್ಷ ಎಂ.ಎಸ್.ಮೀನಾಕ್ಷಿಸುಂದರಂ, ನೇಕಾರರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಜಿ.ಹೇಮಂತರಾಜ್, ಕನ್ನಡ ಪಕ್ಷದ ಉಪಾಧ್ಯಕ್ಷ ಸಂಜೀವ ನಾಯಕ್, ರಾಜ್ಯ ನೇಕಾರ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಆರ್.ಎಸ್. ಶ್ರೀನಿವಾಸಲು, ಖಜಾಂಚಿ ಕೆ. ಮಲ್ಲೇಶ್, ಟಿಎಂಸಿ ಬ್ಯಾಂಕ್ ನಿರ್ದೇಶಕ ಕೆ.ಜಿ.ಗೋಪಾಲ್, ಹೊಸಕೋಟೆ ನೇಕಾರರ ಮುಖಂಡ ಎಂ.ವೆಂಕಟರಾಜು, ದೇವನಹಳ್ಳಿ ಜಿ.ರಂಗಸ್ವಾಮಿ, ವಿಜಯಪುರದ ಮುಖಂಡ ಸುರೇಶ್, ಗೊಟ್ಟಿಗೆರೆ ಸೂರಿ, ಆನೇಕಲ್ ದೇವರಾಜ, ಬೆಂಗಳೂರು ಜಿಲ್ಲಾ ನೇಕಾರ ಸಂಘದ ಅಧ್ಯಕ್ಷ ಅನಂತಯ್ಯ, ಸುರೇಶ್, ಮುನಿರಾಜು, ಎಂ.ಚೌಡಯ್ಯ, ಕೆ.ರಘುಕುಮಾರ, ಧೃವಕುಮಾರ್, ಅನಿಲ್, ಸುರೇಶ್ ಬಾಬು, ಎನ್.ಆರ್.ಸುರೇಶ್, ಭಾಸ್ಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.