ADVERTISEMENT

ದೇಗುಲಗಳ ಜಾಗ ಒತ್ತುವರಿ: ಕಠಿಣ ಕ್ರಮ

ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 2:59 IST
Last Updated 7 ಜನವರಿ 2026, 2:59 IST
ಆನೇಕಲ್‌ನ ಬ್ರಾಹ್ಮಣರ ಸಮುದಾಯ ಭವನದಲ್ಲಿ ಆನೇಕಲ್ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಸದಸ್ಯರ ಸಭೆಯಲ್ಲಿ ಸದಸ್ಯರು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಆನೇಕಲ್‌ನ ಬ್ರಾಹ್ಮಣರ ಸಮುದಾಯ ಭವನದಲ್ಲಿ ಆನೇಕಲ್ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಸದಸ್ಯರ ಸಭೆಯಲ್ಲಿ ಸದಸ್ಯರು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಆನೇಕಲ್: ದೇವಾಲಯದ ಜಾಗ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ವಹಿಸಲಾಗುವುದು. ಮುಜರಾಯಿ ದೇವಾಲಯಗಳಿಗೆ ಸಂಬಂಧಿಸಿದ ಆಸ್ತಿಪಾಸ್ತಿಗಳನ್ನು ಸಂರಕ್ಷಿಸಲು ಸರ್ಕಾರ ಬದ್ಧ ಎಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಪಟ್ಟಣದ ಬ್ರಾಹ್ಮಣರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಆನೇಕಲ್ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಕ್ಷೇಮಾಭಿವೃದ್ಧಿ ಸಂಘ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ದೇಗುಲಗಳ ಎಲ್ಲಾ ಆಸ್ತಿ ರಕ್ಷಿಸಲು ತಡೆಗೋಡೆ ನಿರ್ಮಿಸಲಾಗುವುದು. ಅರ್ಚಕರು ತಮ್ಮ ದೇವಾಲಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜತನದಿಂದ ಕಾಪಾಡಬೇಕು ಎಂದರು.

ADVERTISEMENT

ಮುಜರಾಯಿ ದೇವಾಲಯಗಳ ಅರ್ಚಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಎಲ್ಲಾ ಕ್ರಮ ವಹಿಸಿದೆ. ಅರ್ಚಕರು ಮೃತಪಟ್ಟಾಗ ₹2ಲಕ್ಷ ನೀಡಲಾಗುತ್ತಿತ್ತು. ಈ ಪರಿಹಾರದ ಹಣವನ್ನು ₹3 ಲಕ್ಷಕ್ಕೆ ಏರಿಕೆ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಬೇಡಿಕೆ: ಆನೇಕಲ್ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಸೂರ್ಯನಾರಾಯಣ ದೀಕ್ಷಿತ್, ಸಂಘದ ಸಭೆ ಮತ್ತು ಸಮಾರಂಭಗಳಿಗೆ ಅನುಕೂಲವಾಗುವಂತೆ ಸಂಘದ ಕಚೇರಿಗೆ ಜಾಗ ನೀಡಬೇಕು. ಪ್ರತಿ ದೇವಾಲಯಗಳ ಬಳಿಯು ಪ್ರಸಾದದ ವ್ಯವಸ್ಥೆ ಮಾಡಲು ಅಡುಗೆ ಮನೆ ನಿರ್ಮಿಸಿಕೊಡಬೇಕು. ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.

ಮುಜರಾಯಿ ದೇವಾಲಯಗಳ ಜಮೀನು ರಕ್ಷಣೆಗಾಗಿ ಸರ್ವೆ ಕಾರ್ಯ ಮಾಡಿಸಿ ತಡೆಗೋಡೆ ಹಾಕಿಸಿ ಸಂರಕ್ಷಿಸಬೇಕು. 60 ವರ್ಷ ಮೇಲ್ಪಟ್ಟ ಅರ್ಚಕರಿಗೆ ಪ್ರತಿ ತಿಂಗಳು ಮಾಸಿಕ ವೇತನ ನೀಡಬೇಕು. ಎಲ್ಲರಿಗೂ ಒಳಿತನ್ನು ಬಯಸುವ ಅರ್ಚಕರಿಗೆ ಅವಶ್ಯಕವಿರುವ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಸಂಘದ ಅಧ್ಯಕ್ಷ ಸುಧಾಕರ ದೀಕ್ಷಿತ್, ಉಪಾಧ್ಯಕ್ಷ ಸದಾಶಿವ ಆರಾಧ್ಯ, ಕಾರ್ಯದರ್ಶಿ ನರಸಿಂಹಮೂರ್ತಿ, ಖಜಾಂಚಿ ಬಸವರಾಜು, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಗೋವರ್ಧನ್, ರುದ್ರಾರಾಧ್ಯ, ಲಕ್ಷ್ಮೀನಾರಾಯಣ್, ಗೋವಿಂದ ಭಟ್, ಮರಿಸಿದ್ದಯ್ಯ, ಪಾಪಣ್ಣ ಇದ್ದರು

ಅರ್ಚಕರಿಗೆ ಆರೋಗ್ಯ ವಿಮೆ

ಸೂರಿಲ್ಲದ ಅರ್ಚಕರಿಗೆ ಮನೆ ಕಟ್ಟಿಕೊಳ್ಳಲು ಜಾಗ ನೀಡುವಂತೆ ಸಂಘದಿಂದ ಮನವಿ ಮಾಡಲಾಗಿದ್ದು ಈ ಬಗ್ಗೆ ಚಿಂತನೆ ನಡೆಸಲಾಗುವುದು. ಅರ್ಚಕರಿಗೆ ಆರೋಗ್ಯ ವಿಮೆ ಮಾಡಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಡೆಯಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.