ADVERTISEMENT

ಟೆರ್ರಾ ಫರ್ಮ್‌ ಕಸದ ರಾಶಿಗೆ ಬೆಂಕಿ: ಸ್ಥಳೀಯರಿಗೆ ತೊಂದರೆ

ಬೆಂಕಿಯಿಂದ ದಟ್ಟ ಹೊಗೆ, ಮಕ್ಕಳು, ವೃದ್ಧರಿಗೆ ಉಸಿರಾಟದ ತೊಂದರೆ, ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 12:56 IST
Last Updated 29 ಡಿಸೆಂಬರ್ 2019, 12:56 IST
ಟೆರ್ರಾ ಫರ್ಮ್‌ನಲ್ಲಿನ ಕಸದ ರಾಶಿಯಿಂದ ಬರುತ್ತಿರುವ ಹೊಗೆ
ಟೆರ್ರಾ ಫರ್ಮ್‌ನಲ್ಲಿನ ಕಸದ ರಾಶಿಯಿಂದ ಬರುತ್ತಿರುವ ಹೊಗೆ   

ದೊಡ್ಡಬಳ್ಳಾಪುರ:ಇಲ್ಲಿನಗುಂಡ್ಲಹಳ್ಳಿ ಗ್ರಾಮದ ಸಮೀದಲ್ಲಿನ ಟೆರ್ರಾ ಫರ್ಮ್‌ ಬಿಬಿಎಂಪಿ ಕಸ ವಿಲೇವಾರಿ ಘಟಕದಲ್ಲಿ ಸಂಗ್ರಹ ಮಾಡಲಾಗಿದ್ದ ಬೃಹತ್‌ ಕಸದ ರಾಶಿಗೆ ಮತ್ತೆ ಬೆಂಕಿ ತಾಗಿದ್ದು, ಸುತ್ತಲಿನ ಗ್ರಾಮಗಳಲ್ಲಿ ಹೊಗೆಯಿಂದಾಗಿ ಉಸಿರಾಟದ ತೊಂದರೆ ಎದುರಾಗಿದೆ. ಪರಿಣಾಮ ಮಕ್ಕಳು, ವೃದ್ದರಿಗೆ ಆರೋಗ್ಯದಸಮಸ್ಯೆ ಉಂಟಾಗುತ್ತಿದೆ.

ಕಸದ ರಾಶಿಯನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಹಣ ಖರ್ಚಾಗುತ್ತದೆ ಎಂಬ ಉದ್ದೇಶದಿಂದಲೇ ಬೆಂಕಿ ಹಚ್ಚಲಾಗಿದೆ. ಇಡೀ ಗ್ರಾಮದಲ್ಲಿ ಹೊಗೆ ಆವರಿಸಿಕೊಂಡಿದೆ. ಕಸದ ರಾಶಿಯಲ್ಲಿನ ಪ್ಲಾಸ್ಟಿಕ್‌ ಮತ್ತಿತರ ವಸ್ತುಗಳು ಸುಟ್ಟಿರುವುದರಿಂದ ಹೊಗೆ ಸೇವನೆ ಇಂದ ತಲೆ ನೋವು, ಕಣ್ಣು ಉರಿ ಕಾಣಿಸಿಕೊಂಡಿದೆ. ನಮ್ಮ ಪಾಡನ್ನು ಕೇಳುವವರು ಯಾರು ಎಂದು ಗುಂಡ್ಲಹಳ್ಳಿ ಗ್ರಾಮದ ನಿವಾಸಿ ಅಳಲು ತೋಡಿಕೊಂಡರು.

ಟೆರ್ರಾ ಫರ್ಮ್‌ ಕಸ ವಿಲೇವಾರಿ ಘಟಕದಲ್ಲಿ ಸೂಕ್ತ ರೀತಿಯಲ್ಲಿ ಕಸ ವಿಂಗಡಣೆ, ವಿಲೇವಾರಿ ಮಾಡುತ್ತಿರಲಿಲ್ಲ. ಇದರಿಂದ ಸುತ್ತಲಿನ ಪರಿಸರ ಮತ್ತು ಜನರ ವಾಸಕ್ಕೆ ತೊಂದರೆಯಾಗುತ್ತಿದೆ ಎಂದು ದೂರಲಾಗಿತ್ತು. ಸ್ಥಳೀಯರ ಪ್ರತಿಭಟನೆಯಿಂದಾಗಿ 2016ರಿಂದ ಘಟಕವನ್ನು ಬಂದ್‌ ಮಾಡಲಾಗಿದೆ. ಆದರೆ ವಿಲೇವಾರಿ ಘಟಕದಲ್ಲಿ ಇದ್ದ ಬೃಹತ್‌ ಕಸದ ರಾಶಿಯನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎನ್ನುವ ನಿಯಮದೊಂದಿಗೆ ಘಟಕದ ಬಾಗಿಲು ಮುಚ್ಚಿಸಲಾಗಿತ್ತು.

ADVERTISEMENT

ಸುಮಾರು ನೂರು ಎಕರೆ ಪ್ರದೇಶದಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗಿದ್ದ ಕಸ ತಂದು ಇಲ್ಲಿ ಬೆಟ್ಟದಂತೆ ರಾಶಿ ಹಾಕಲಾಗಿತ್ತು. ಕಸದ ರಾಶಿಗೆ ಬೆಂಕಿ ಹೆಚ್ಚಿದ ಆರೋಪದ ಮೇಲೆ ದೊಡ್ಡಬೆಳವಂಗಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಟೆರ್ರಾ ಫರ್ಮ್‌ ಮಾಲೀಕರನ್ನು ಬಂಧಿಸಲಾಗಿತ್ತು. ಇಷ್ಟೆಲ್ಲ ಆದ ಮೇಲೂ ಈಗ ಮತ್ತೆ ಕಸದ ರಾಶಿಗೆ ಬೆಂಕಿ ಬಿದ್ದಿದ್ದು ದಟ್ಟವಾದ ಹೊಗೆ ಹೊರ ಬರುತ್ತಿದ್ದು ಸ್ಥಳೀಯರ ಉಸಿರಾಟಕ್ಕೆ ತೀವ್ರ ತೊಂದರೆಯಾಗಿದೆ.

ಬಿಬಿಎಂಪಿ ವ್ಯಾಪ್ತಿಯಿಂದ ಟೆರ್ರಾ ಫರ್ಮ್‌ಗೆ ಕಸ ತಂದು ರಾಶಿ ಹಾಕುತ್ತಿದ್ದ ಸಂದರ್ಭದಲ್ಲಿ ಬೆಂಕಿ ನಂದಿಸುವ, ಹೊಗೆ ಮೇಲೇಳದಂತೆ ಮಣ್ಣಿನಿಂದ ಮುಚ್ಚುವ ಕೆಲಸವನ್ನಾದರು ಮಾಡುತ್ತಿದ್ದರು. ಈಗ ಎರಡು ದಿನಗಳಿಂದಲೂ ಕಸದ ರಾಶಿಯಿಂದ ಹೊಗೆ ಬರುತ್ತಲೇ ಇದೆ. ಯಾರೂ ಇದುವರೆಗೂ ಹೊಗೆಯನ್ನು ಹತೋಟಿಗೆ ತರುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಆಳಲು ತೋಡಿಕೊಂಡರು ಇಲ್ಲಿನ ನಿವಾಸಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.