ADVERTISEMENT

ದೇವನಹಳ್ಳಿ: ಕೊರೊನಾ ಸೋಂಕು ತಡೆ; ಪರೀಕ್ಷೆ ಅನಿವಾರ್ಯ

ಜಿಲ್ಲೆಯಲ್ಲಿ ಮುಂದುವರಿದ ಕೊರೊನಾ ಜನಜಾಗೃತಿ ಕಾರ್ಯಕ್ರಮ

ವಡ್ಡನಹಳ್ಳಿ ಬೊಜ್ಯನಾಯ್ಕ
Published 12 ಜೂನ್ 2020, 7:17 IST
Last Updated 12 ಜೂನ್ 2020, 7:17 IST
ದೇವನಹಳ್ಳಿಯ ಕೋವಿಡ್ 19 ವೈದ್ಯಕೀಯ ಪರೀಕ್ಷಾ ಕೇಂದ್ರ
ದೇವನಹಳ್ಳಿಯ ಕೋವಿಡ್ 19 ವೈದ್ಯಕೀಯ ಪರೀಕ್ಷಾ ಕೇಂದ್ರ   

ದೇವನಹಳ್ಳಿ: ‘ಸ್ಯಾನಿಟೈಸರ್ ಹಚ್ಚಿಕೊಂಡು ಅಂತರ ಕಾಯ್ದು ನಿಂತಿರುವವರು, ವಿಳಾಸ ಕೇಳುತ್ತಿರುವ ಆರೋಗ್ಯ ಸಿಬ್ಬಂದಿ, ಆರೋಗ್ಯ ಸೇತು ಆ್ಯಪ್‌ ಕಡ್ಡಾಯ ಅಳವಡಿಸಿಕೊಳ್ಳಬೇಕು’ ಎಂದು ತಾಕೀತು ಮಾಡುತ್ತಿರುವ ಅಧಿಕಾರಿಗಳು...

ಇದು ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗುರುವಾರ ಕಂಡು ಬಂದ ದೃಶ್ಯಗಳು.
ರಾಜ್ಯದಲ್ಲಿ ಸೋಂಕಿನ ಕಡಿವಾಣ ಹೆಚ್ಚತ್ತಲೇ ಇದೆ. ಇದರ ಪರಿಣಾಮ ಸರ್ಕಾರ ತಜ್ಞರ ಸಲಹೆ ಮೇರೆಗೆ ಸ್ವಯಂ ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕೋವಿಡ್–19ರ ವೈದ್ಯಕೀಯ ಸ್ವಯಂ ತಪಾಸಣೆ ಕೇಂದ್ರ ಆರಂಭಿಸಿರುವುದರಿಂದ ಸೋಂಕಿನ ಭಯದಿಂದ ಹೊರ ಬರಲಾರದೆ ಗೊಂದಲದಲ್ಲಿದ್ದ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ತಪಾಸಣೆಗೆ ಒಳಗಾಗುತ್ತಿರುವುದು ಕೋವಿಡ್ 19 ತಡೆಗೆ ಆಶಾದಾಯಕವಾಗಿದೆ ಎನ್ನುತ್ತಾರೆ ಆರೋಗ್ಯ ಸಿಬ್ಬಂದಿ.

‘ಸೋಂಕು ತಡೆಗೆ ಸಾಮೂಹಿಕ ಸಹಭಾಗಿತ್ವದಡಿಯಲ್ಲಿ ಜಾಗೃತಿ ಮೂಡಿಸಿ ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಬರುತ್ತಿರುವುದು ಸೋಂಕು ಕಡಿವಾಣಕ್ಕೆ ಮುನ್ಸೂಚನೆ ಎನ್ನುತ್ತಾರೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ.

ADVERTISEMENT

ಕೊರೊನ ವಾರಿಯರ್ಸ್ ಎಂದು ಕರೆಯಿಸಿಕೊಳ್ಳುವ ಆರೋಗ್ಯ ಸಹಾಯಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೊಲೀಸರ ಶ್ರಮ ಕೋವಿಡ್ 19ರ ಕಡಿವಾಣಕ್ಕೆ ಕೈಜೋಡಿಸಿದೆ.

‘ನಮಗೆ ಕೃತಜ್ಞತೆ ತೋರಿಸುವ ಬದಲು ಕೋವಿಡ್ 19 ವೈದ್ಯಕೀಯ ತಪಾಸಣೆ ಕೇಂದ್ರಕ್ಕೆ ಬಂದು ಪ್ರಜ್ಞಾವಂತ ಸಾರ್ವಜನಿಕರು ಸಹಕರಿಸಿದರೆ ಅದೇ ನಮಗೆ ನೀಡುವ ಧನ್ಯತಾ ಭಾವನೆ’ ಎನ್ನುತ್ತಾರೆ ಪೊಲೀಸ್‌ ಕಾನ್‌ಸ್ಟೇಬಲ್‌ಗಳಾದ ಪುಟ್ಟರಾಜು ಮತ್ತು ಶಿವಕುಮಾರ್.

‘ಆರಂಭದ ದಿನಗಳಲ್ಲಿ ವಲಸಿಗರಿಗೆ, ಸ್ಥಳೀಯ ಬಡವರಿಗೆ ಎರಡೆರಡು ಬಾರಿ ದಿನಸಿ ಮತ್ತು ತರಕಾರಿಗಳ ಕಿಟ್ ವಿತರಣೆ ರಾಜಕೀಯವಾಗಿ ಗುರುತಿಸಿಕೊಳ್ಳಲು ಒಂದು ವೇದಿಕೆಯಾಗಿತ್ತು. 50ರಿಂದ 500ರವರೆಗೆ ಕಿಟ್ ವಿತರಿಸಿದವರ ಕೊರತೆ ಇಲ್ಲ. ಕಿಟ್ ವಿತರಣೆ 10 ರಿಂದ 15 ದಿನ ಸಿಮಿತವಾಗಿತ್ತು. ಕಿಟ್‌ಗಳ ದಾನಿ ಯಾರೊ ಆದರೆ, ಬಿಂಬಿಸಿಕೊಂಡವರು ಮತ್ತೊಬ್ಬರು. ನಾಲ್ಕು ತಾಲ್ಲೂಕು ಕೇಂದ್ರದಲ್ಲಿ ನಾಲ್ಕು ಕೋವಿಡ್ 19 ಸ್ವಯಂ ತಪಾಸಣಾ ಕೇಂದ್ರ ಮಾರ್ಚ್‌ 14ರಂದು ಆರಂಭಿಸಲಾಗಿದೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವಯೋವೃದ್ಧರು ಮುಖ್ಯವಾಗಿ ಪ್ರತಿಯೊಬ್ಬರು ಸ್ವಯಂ ಪರೀಕ್ಷೆಗೆ ಒಳಗಾದರೆ ಸೋಂಕಿನ ಕಡಿವಾಣಕ್ಕೆ ಹೆಚ್ಚಿನ ಅನುಕೂಲವಾಗಲಿದೆ’ ಎನ್ನುತ್ತಾರೆ ಜಿಲ್ಲಾ ಕುಟುಂಬ
ಕಲ್ಯಾಣ ಯೋಜನಾಧಿಕಾರಿ ಡಾ.ಶ್ರೀನಿವಾಸ್.

‘ಜಿಲ್ಲೆಯಲ್ಲಿ ಈವರೆಗೆ ಹೊರಗಿನಿಂದ ಬಂದವರಿಗೆ ಸೊಂಕು ಲಕ್ಷಣ ಕಂಡು ಬಂದಿದ್ದರೂ ಅವರ ಸಮೀಪವರ್ತಿಗಳ ಪರೀಕ್ಷೆಯಲ್ಲಿ ಸೋಂಕು ಕಂಡು ಬಂದಿಲ್ಲ. ಸರ್ಕಾರದ ಅದೇಶದನ್ವಯ ಪ್ರತಿಯೊಂದು ಮಾರ್ಗ ಸೂಚಿಗಳನ್ನು ಅನುಸರಿಸಲಾಗುತ್ತಿದೆ. ನಾಲ್ಕು ಕೋವಿಡ್‌ ಪರೀಕ್ಷಾ ಕೇಂದ್ರದಲ್ಲಿ ಪ್ರತಿ ಕೇಂದ್ರಕ್ಕೆ ಪ್ರತಿ ದಿನ 60ರಿಂದ 70 ಸ್ವಯಂ ಪ್ರೇರಿತರು ಪರೀಕ್ಷೆ ಒಳಗಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.