ADVERTISEMENT

ಹೊಸಕೋಟೆ: ಪೊಲೀಸ್ ಠಾಣೆ ಎದುರಿನ 3 ಮಳಿಗೆಯಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 23:49 IST
Last Updated 12 ನವೆಂಬರ್ 2025, 23:49 IST
ನಂದಗುಡೊ ಪೊಲೀಸ್ ಠಾಣೆ ಎದುರಿನ ಮೆಡಿಕಲ್‌ನಲ್ಲಿ ಕಳ್ಳತನ ನಡೆದಿದೆ
ನಂದಗುಡೊ ಪೊಲೀಸ್ ಠಾಣೆ ಎದುರಿನ ಮೆಡಿಕಲ್‌ನಲ್ಲಿ ಕಳ್ಳತನ ನಡೆದಿದೆ   

ನಂದಗುಡಿ (ಹೊಸಕೋಟೆ): ಚಿಂತಾಮಣಿ ಮತ್ತು ಹೊಸಕೋಟೆ ಮುಖ್ಯರಸ್ತೆಯಲ್ಲಿರುವ ಪೊಲೀಸ್ ಠಾಣೆ ಎದುರಿನಲ್ಲಿರುವ ಮೂರು ಅಂಗಡಿಗಳಲ್ಲಿ ಮಂಗಳವಾರ ರಾತ್ರಿ ಕಳ್ಳತನ ನಡೆದಿದೆ.

ಅಂಗಡಿಯಲ್ಲಿದ್ದ ಸಣ್ಣ ಮೊತ್ತದ ಹಣ ಹಾಗೂ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಮಧ್ಯರಾತ್ರಿ ಗಾಂಧಿ ವೃತ್ತದಲ್ಲಿರುವ ಮಧು ಮೆಡಿಕಲ್ ಮತ್ತು ಜನರಲ್ ಸ್ಟೋರ್‌ ಬೀಗ ಮುರಿದ ಕಳ್ಳರು ₹80 ಸಾವಿರ ಮೌಲ್ಯದ ಸಿಗರೇಟ್ ಬಂಡಲ್‌, ₹70 ಸಾವಿರ ನಗದು ಕಳವು ಮಾಡಿದ್ದಾರೆ.

ADVERTISEMENT

ಬಳಿಕ ಹೊಸಕೋಟೆ-ಚಿಂತಾಮಣಿ ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿರುವ ಪೊಲೀಸ್ ಠಾಣೆ ಎದುರಿನಲ್ಲಿರುವ ಮಾರುತಿ ಮೆಡಿಕಲ್‌ನಲ್ಲಿ ₹1ಸಾವಿರ ನಗದು ಹಾಗೂ ಸಾವಿರಾರು ರೂ‍ಪಾಯಿ ಬೆಲೆ ಬಾಳುವ ಹಾರ್ಲಿಕ್ಸ್, ಬೂಸ್ಟ್ ಬಾಟಲ್‌ಗಳನ್ನು ಕಳ್ಳತನ ಮಾಡಿದ್ದಾರೆ.

ಪಕ್ಕದಲ್ಲಿರುವ ಮಂಜುನಾಥ ಪ್ರಾವಿಜನ್ ಸ್ಟೋರ್‌ ಬೀಗ ಮುರಿದಿದ್ದಾರೆ. ಆದರೆ, ಬಾಗಿಲು ತೆಗೆಯಲು ಸಾಧ್ಯವಾಗದೆ ವಾಪಸ್‌ ತೆರಳಿದ್ದಾರೆ.

ಎಂದಿನಂತೆ ಮರುದಿನ ಬೆಳಗ್ಗೆ ಅಂಗಡಿ ಮಾಲೀಕರು ಬಾಗಿಲು ತೆರೆಯಲು ಹೋದಾಗ ವಿಷಯ ಬೆಳಕಿಗ ಬಂದಿದೆ. ಮಾಲೀಕರು ನಂದಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದಾರೆ.

‘ಕಳ್ಳತನವಾದ ಅಂಗಡಿ ಮುಂಗಟ್ಟುಗಳ ಸ್ಥಳ ಮಹಜರು ನಡೆಸಿದ ಬಳಿಕ ದೂರು ನೀಡುವಂತೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿತ್ತು. ಇನ್ನೂ ದೂರು ಸಲ್ಲಿಸಿಲ್ಲ. ₹20 ರಿಂದ ₹25 ಸಾವಿರ ನಗದು ಕಳ್ಳತನವಾಗಿದೆ. ಹಾಗಾಗಿ ದೂರು ನೀಡಲು ಮುಂದೆ ಬಂದಿಲ್ಲ. ಈ ಪ್ರಕರಣ ಇತರ ಪ್ರಕರಣಗಳೊಂದಿಗೆ ಏನಾದರೂ ಸಂಬಂಧ ಹೊಂದಿದೆಯೇ ಎಂದು ಎಲ್ಲಾ ಆಯಾಮದಿಂದ ತನಿಖೆ ನಡೆಸಿ, ಕಳ್ಳರನ್ನು ಶೀಘ್ರ  ಬಂಧಿಸಲಾಗುವುದು’ ಎಂದು ನಂದಗುಡಿ ಇನ್‌ಸ್ಪೆಕ್ಟರ್ ಶಾಂತರಾಮ್ ತಿಳಿಸಿದ್ದಾರೆ.

ಹೊಸಕೋಟೆ ತಾಲ್ಲೂಕಿನ ನಂದಗುಡಿಯ ಹೊಸಕೋಟೆ-ಚಿಂತಾಮಣಿ ರಾಜ್ಯ ಹೆದ್ದಾರಿಯಲ್ಲಿರುವ ಮೆಡಿಕಲ್‌ ಹಾಗೂ ಕಿರಾಣಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ

ಹಣ ವಸೂಲಿ ಮಾಡಿದರೂ ಸಿಸಿಟಿವಿ ಅಳವಡಿಸಿಲ್ಲ

ಮೂರ್ನಾಲ್ಕು ವರ್ಷಗಳ ಹಿಂದೆಯೇ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗಾಗಿ ಸ್ಥಳೀಯ ಅಂಗಡಿ ಮಾಲೀಕರಿಂದ ಪೊಲೀಸರು ಹಣ ಸಹ ಸಂಗ್ರಹ ಮಾಡಿಕೊಂಡಿದ್ದು ಇಲ್ಲಿವರೆಗೂ ಸಿಸಿ ಕ್ಯಾಮೆರಾ ಅಳವಡಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.   ಹೊಸಕೋಟೆ-ಚಿಂತಾಮಣಿ ರಾಜ್ಯ ಹೆದ್ದಾರಿ ಪಕ್ಕದಲ್ಲೆ ಹಾಗೂ ಪೊಲೀಸ್ ಠಾಣೆ ಎದುರು ಇರುವ ಅಂಗಡಿಗಳಲ್ಲೆ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.