ADVERTISEMENT

ಬೆಂಗಳೂರು ವಿಮಾನ ನಿಲ್ದಾಣ ರಸ್ತೆ ಅಪಘಾತ: ವಿಭಜಕಕ್ಕೆ ಕಾರು ಡಿಕ್ಕಿ; ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 4:58 IST
Last Updated 19 ನವೆಂಬರ್ 2021, 4:58 IST
ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ವಾಹನ
ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ವಾಹನ   

ಯಲಹಂಕ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ಬೆಂಗಳೂರಿನತ್ತ ವೇಗವಾಗಿ ಬರುತ್ತಿದ್ದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮತ್ತೊಂದು ಬದಿಯಲ್ಲಿ ಸಾಗುತ್ತಿದ್ದ ಜೆಸ್ಟ್‌ ಕಾರಿನ ಮೇಲೆ ಬಿದ್ದಿದೆ. ಕಾರು ಬಿದ್ದ ರಭಸಕ್ಕೆ ಜೆಸ್ಟ್‌ ಕಾರಿನಲ್ಲಿದ್ದ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕಿನ ಬೆಟ್ಟಹಲಸೂರು ಕ್ರಾಸ್‌ನಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ.

‘ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ಜೈಲೊ ಕಾರು ಅತಿ ವೇಗವಾಗಿ ಬರುತ್ತಿತ್ತು. ಮಳೆಯ ಕಾರಣ ದಾರಿ ಕಾಣದೆ ಚಾಲಕ ರಸ್ತೆ ವಿಭಜಕಕ್ಕೆ ಗುದ್ದಿದ್ದಾನೆ. ಆ ಕಾರು ಮತ್ತೊಂದು ಬದಿಯಲ್ಲಿ ಸಾಗುತ್ತಿದ್ದ ಜೆಸ್ಟ್‌ ಕಾರಿನ ಮೇಲೆ ಬಿದ್ದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಕಾರು ನುಜ್ಜುಗುಜ್ಜಾಗಿದ್ದರಿಂದ ಅದರಲ್ಲಿದ್ದವರ ದೇಹವನ್ನು ಹೊರ ತೆಗೆಯಲು ಸಾಧ್ಯವಾಗಿರಲಿಲ್ಲ. ಸಂಚಾರ ದಟ್ಟಣೆ ಉಂಟಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಮೃತದೇಹದೊಂದಿಗೆ ಕಾರನ್ನು ಟೋಯಿಂಗ್‌ ಮಾಡಿದ್ದರು. ಘಟನೆ ನಡೆದ ಸ್ಥಳದಿಂದ ಒಂದು ಕಿಲೊ ಮೀಟರ್‌ ದೂರಕ್ಕೆ ತಂದು ಅದರೊಳಗೆ ಸಿಲುಕಿಕೊಂಡಿದ್ದ ದೇಹಗಳನ್ನು ತೆಗೆಯಲು ಹರಸಾಹಸಪಟ್ಟರು’ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.