ADVERTISEMENT

ಯಾವ ಮಕ್ಕಳೂ ಈ ರೀತಿ ಮಾಡಿಕೊಳ್ಳಬೇಡಿ...: ಮಕ್ಕಳ ಮೃತದೇಹ ಕಂಡು ಪೋಷಕರ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 5:15 IST
Last Updated 16 ಫೆಬ್ರುವರಿ 2026, 5:15 IST
   

ಪೀಣ್ಯ ದಾಸರಹಳ್ಳಿ: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಿಂದಾಲ್ ಬಳಿ ಶನಿವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಮಕ್ಕಳ ಮೃತದೇಹಗಳನ್ನು ಕಂಡು ಪೋಷಕರು ಕಣ್ಣೀರಿಟ್ಟರು. ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಗಳನ್ನು ಇರಿಸಲಾಗಿತ್ತು. ಸಂಬಂಧಿಕರು, ಸ್ನೇಹಿತರು ಪೋಷಕರನ್ನು ಸಂತೈಸಿದರು.

ಒಬ್ಬನೇ ಮಗನನ್ನು ಕಳೆದುಕೊಂಡ ದುರ್ಗಾ ಪ್ರಸಾದ್ ತಾಯಿ ಮಂಜುಳಾ, ‘ಪಿಯುಸಿ ಮುಗಿಸಿದ ಬಳಿಕ ಮಗ ಕೆಲಸ ಮಾಡಿಕೊಂಡಿದ್ದ. ಹತ್ತೇ ನಿಮಿಷದಲ್ಲಿ ಬರುತ್ತೇನೆ ಅಂತ ಹೋದವನು ಶವವಾಗಿ ಬಂದಿದ್ದಾನೆ. ಒಬ್ಬನೇ ಮಗನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ’ ಎಂದು ಕಣ್ಣೀರಿಟ್ಟರು.

‘ದಯವಿಟ್ಟು ಯಾವ ಮಕ್ಕಳು ಈ ರೀತಿ ಮಾಡಿಕೊಳ್ಳಬೇಡಿ’ ಎಂದು ದುರ್ಗಾಪ್ರಸಾದ್ ತಂದೆ ಗುರುರಾಜ್ ಮನವಿ ಮಾಡಿದರು.

ADVERTISEMENT

‘ಹರ್ಷಿತ್​​ ರಾತ್ರಿ 8.30ರ ವರೆಗೂ ಮನೆಯಲ್ಲಿಯೇ ಇದ್ದ. ಬಳಿಕ ಸ್ನೇಹಿತನ ಭೇಟಿ ಮಾಡಿ ಬರುವುದಾಗಿ ಮನೆಯಿಂದ ಹೊರ ಹೋದವನು ವಾಪಸ್ ಬರಲಿಲ್ಲ’ ಎಂದು ಮಗನ ಮೃತದೇಹ‌ ತಬ್ಬಿ ಹರ್ಷಿತ್​​ ತಾಯಿ ಕಣ್ಣೀರು ಹಾಕಿದರು.

ಧನುಷ್ ತಂದೆ ಮಾತನಾಡಿ, ‘ಮಗ ರಾತ್ರಿ ಮನೆಗೆ ಬಂದಿದ್ದ. ಅಮ್ಮ ಮತ್ತು ತಮ್ಮನನ್ನು ಬೇಕರಿಗೆ ಕರೆದೊಯ್ದು ಸಿಹಿ ಕೊಡಿಸಿ, 10 ನಿಮಿಷದಲ್ಲಿ ಬರ್ತಿನಿ ಅಂತ ಹೇಳಿ ಹೋಗಿದ್ದ. ಪೊಲೀಸರು ಕರೆ ಮಾಡಿ ಸಾವಿನ ವಿಷಯ ತಿಳಿಸಿದರು. ಆಗ ಮಗನ ಕೈ ಮೇಲೆ ಪುನೀತ್ ರಾಜಕುಮಾರ್ ಹೆಸರಿನ ಹಚ್ಚೆ ಇದೆಯಾ ಅಂತ ಕೇಳಿದೆ. ಟ್ಯಾಟೂ ಇದೆ ಅಂತ ಹೇಳಿದಾಗ ಬರಸಿಡಿಲು ಬಡಿದಂತಾಯ್ತು. ಮಗನಿಗೆ ಈಗ 17 ವರ್ಷ’ ಎಂದು ಅವರು ಮರುಗಿದರು.

‘ಮಗ ಲಲಿತ್ ಬಿ.ಕಾಂ ಮುಗಿಸಿಕೊಂಡು ಸಿ.ಸಿ.ಟಿ.ವಿ ಕ್ಯಾಮೆರಾ ರಿಪೇರಿ ಕೆಲಸ ಮಾಡಿಕೊಂಡಿದ್ದ. ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿದಷ್ಟೆ. ಆ ನಂತರ ಸಾವಿನ ಸುದ್ದಿ ಬಂದಿದೆ’ ಎಂದು ಲಲಿತ್ ತಾಯಿ ಕಣ್ಣೀರು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.