ADVERTISEMENT

ಸವಾಲು ಎದುರಿಸುವ ಸಂಕಲ್ಪ ಮಾಡಿ

ಖಾಸಗಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಚಿವ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 5:08 IST
Last Updated 15 ಜನವರಿ 2023, 5:08 IST
ಆನೇಕಲ್‌ನ ಅಲಯನ್ಸ್ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು
ಆನೇಕಲ್‌ನ ಅಲಯನ್ಸ್ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು   

ಆನೇಕಲ್: ಪಟ್ಟಣಕ್ಕೆ ಸಮೀಪದ ಅಲಯನ್ಸ್‌ ವಿಶ್ವವಿದ್ಯಾಲಯದ ಘಟಿಕೋತ್ಸವ ಶನಿವಾರ ನಡೆಯಿತು.

ಪದವಿ ಮತ್ತು ಡಿಪ್ಲೋಮ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಉದ್ಘಾಟಿಸಿದರು.

ಸಚಿವ ಡಾ.ಸಿ.ಎನ್‌.ಅಶ್ವಥನಾರಾಯಣ್‌ ಮಾತನಾಡಿ, ಉನ್ನತ ಸಾಧನೆಯು ಯುವ ಸಮುದಾಯದ ಗುರಿಯಾಗಬೇಕು. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡುವತ್ತ ಗಮನ ಹರಿಸಬೇಕು. ಸವಾಲುಗಳನ್ನು ಎದುರಿಸುವ ಸಂಕಲ್ಪ ಮಾಡಿದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.

ADVERTISEMENT

ಸವಾಲು ಎದುರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಕೂಲಕರವಾಗಿದೆ. ಕಲಿಕೆಯ ಸಂದರ್ಭದಲ್ಲಿಯೇ ಸಾಮಾಜಿಕ ಗುಣಗಳನ್ನು ಬೆಳೆಸಿಕೊಳ್ಳುವುದು ಯುವಕರ ಜವಾಬ್ದಾರಿಯಾಗಿದೆ. ಸಮಾಜ ವಿದ್ಯಾರ್ಥಿಗಳಿಗೆ ಹಲವು ಪಾಠಗಳನ್ನು ಕಲಿಸುತ್ತದೆ. ಪ್ರತಿಯೊಬ್ಬರು ತಮ್ಮ ಶಕ್ತಿ ಮತ್ತು ದೌರ್ಬಲ್ಯಗಳ ಬಗ್ಗೆ ಗಮನ ಹರಿಸಿ ದೌರ್ಬಲ್ಯಗಳನ್ನು ಕಡಿಮೆ ಮಾಡಿಕೊಂಡು ದೊರೆಯುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು
ಎಂದರು.

ಗುಣಾತ್ಮಕ ಮತ್ತು ಮೌಲ್ಯಯುತ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಕರ್ನಾಟಕ ಸರ್ಕಾರ ಸ್ಟಾರ್ಟ್‌ ಅಪ್‌ ಕರ್ನಾಟಕ, ಟೆಕ್‌ ಸಮ್ಮಿತ್‌, ಸ್ಕಿಲ್‌ ಕನೆಕ್ಟ್‌ ಮೂಲಕ ಯುವ ಸಮುದಾಯಕ್ಕೆ ವೇದಿಕೆ ಕಲ್ಪಿಸಿದೆ. ಕೌಶಲ ಅಭಿವೃದ್ಧಿಯನ್ನು ಪಡೆಯುವತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು. ಉದ್ಯೋಗಗಳಿಗಾಗಿ ಹುಡುಕಾಟ ನಡೆಸದೇ ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗಗಳನ್ನು ಸೃಷ್ಠಿ ಮಾಡುವತ್ತ ಯುವಕರು ಶ್ರಮಿಸಬೇಕು ಎಂದರು.

ಅಲಯನ್ಸ್‌ ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್‌.ಜಿ.ಚೆಬ್ಬಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ತಲುಪುವ ನಿಟ್ಟಿನಲ್ಲಿ ಪದವಿಯನ್ನು ಉಪಯೋಗಿಸಬೇಕು. ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ನಮ್ಮ ಗುರಿ. ಕಾನೂನು, ಮ್ಯಾನೇಜ್‌ಮೆಂಟ್‌, ಎಂಜಿನಿಯರಿಂಗ್‌, ಲಿಬರಲ್‌ ಆರ್ಟ್ಸ್‌ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದರು.

ನಿಷ್ಪಕ್ಷಪಾತ ತನಿಖೆ: ಸ್ಯಾಂಟ್ರೋ ರವಿ ಬಂಧನವಾಗಿದೆ. ಈತನ ಬಗೆಗಿನ ಆರೋಪಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ..ಸಿ.ಎನ್‌.ಅಶ್ವಥನಾರಾಯಣ ಹೇಳಿದರು.

ಅಲಯನ್ಸ್‌ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಗೃಹ ಸಚಿವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಗೃಹ ಸಚಿವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು ಮುಕ್ತವಾಗಿ ತನಿಖೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿಯೇ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಸಂಬಂಧ ಸರ್ಕಾರ ಮುಕ್ತ ಮನಸ್ಸಿನಿಂದ ಕೆಲಸ ಮಾಡುತ್ತಿದೆ. ಪರಿಸ್ಥಿತಿಯ ಸೂಕ್ಷ್ಮತೆ ಅರಿತು ತೀರ್ಮಾನ ಕೈಗೊಳ್ಳುತ್ತಿದೆ. ವಿವಿಧ ಸಮುದಾಯಗಳು ಮೀಸಲಾತಿಗಾಗಿ ಒತ್ತಾಯ ಮಾಡುತ್ತಿವೆ. ಹಾಗಾಗಿ ಎಲ್ಲಾ ಸಮುದಾಯಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

2,000 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 20 ಮಂದಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಕರ್ನಾಟಕ ಕಾನೂನು ಪ್ರಾಧಿಕಾರದ ಅಧ್ಯಕ್ಷ ಜಸ್ಟೀಸ್‌ ಎಸ್‌.ಆರ್‌.ಬನ್ನೂರ ಮಠ್‌, ಉದ್ಯಮಿ ಹರ್ಷಿತ್‌ ಸಿಂಘಾಲ್‌, ಅಲಯನ್ಸ್‌ ವಿಶ್ವವಿದ್ಯಾಲಯ ಕುಲಪತಿ ಪ್ರೇಮಾನಂದ್‌ ಶೆಟ್ಟಿ, ವಿಶ್ವವಿದ್ಯಾಲಯದ ಅನುಬಾ ಸಿಂಗ್‌, ಡಾ.ಪುನಿತ್‌ ಕರಿಯಪ್ಪ, ಶೈಲಾ ಚೆಬ್ಬಿ, ಸುರೇಖಾ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.