ADVERTISEMENT

ಕೆಂಪೇಗೌಡರ ನೆನಪಿಗೆ ವಿಶ್ವವಿದ್ಯಾಲಯಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 15:32 IST
Last Updated 27 ಜೂನ್ 2019, 15:32 IST
ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು
ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು   

ದೇವನಹಳ್ಳಿ: 'ನಾಡಪ್ರಭು ರಣಭೈರೇಗೌಡರ ಕರ್ಮಭೂಮಿಯಾಗಿರುವ ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಶಾಶ್ವತ ನೆನಪಿಗೆ ಕೆಂಪೇಗೌಡ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ತರಲು ಸರ್ಕಾರ ಮುಂದಾಗಬೇಕು' ಎಂದು ತಾಲ್ಲೂಕು ವಕೀಲರ ಸಂಘ ಅಧ್ಯಕ್ಷ ಬೈರೇಗೌಡ ಒತ್ತಾಯಿಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ 509ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರುಮಾತನಾಡಿದರು. ಕೆಂಪೇಗೌಡರ ವಂಶಸ್ಥರ ಕರ್ಮಭೂಮಿ ಆವತಿ ಗ್ರಾಮವನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಮೂಲಸ್ಥಾನ ಕರ್ಮಭೂಮಿ ಬಿಟ್ಟು ವಿಧಾನಸೌಧದ ಬಾಂಕ್ವೆಟ್‌ ಸಭಾಂಗಣದಲ್ಲಿ ಜಯಂತಿ ಸಿಮಿತವಾಗಿದೆ, ರಾಜ್ಯ ಮಟ್ಟದ ಜಯಂತಿ ದೇವನಹಳ್ಳಿ ತಾಲ್ಲೂಕಿನಲ್ಲಿ ಆಗಬೇಕು’ ಎಂದು ಆಗ್ರಹಿಸಿದರು.

ಒಕ್ಕಲಿಗರ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ‘ಕಳೆದ ವರ್ಷ ಜಯಂತಿ ಅದ್ದೂರಿಯಾಗಿ ನಡೆಸಲಾಗಿತ್ತು, ಈ ಬಾರಿ ಜಿಲ್ಲಾಡಳಿತ ಭವನದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಅಶ್ವಾರೂಢ ಪ್ರತಿಮೆ ಅನಾವರಣ ಮಾಡುವ ಉದ್ದೇಶದಿಂದ ₹ 45 ಲಕ್ಷ ವೆಚ್ಚದಲ್ಲಿ ಕಂಚಿನ ಪ್ರತಿಮೆ ಸಿದ್ಧಗೊಳ್ಳುತ್ತಿದೆ. ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ ಇರುವ ವಿವಿಧ ಕ್ಷೇತ್ರದ ಸಾಧಕರನ್ನು ಆಹ್ವಾನಿಸಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಸುವ ಚಿಂತನೆ ಇದೆ. ಸಮುದಾಯದವರು ಸಹಕರಿಸಬೇಕು’ ಎಂದು ಕೋರಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್ ಗೌಡ ಮಾತನಾಡಿ, ‘ನಾಡಪ್ರಭುಗಳು ವಿಜಯನಗರ ಸಾಮ್ರಾಜ್ಯದ ರಾಜರೊಂದಿಗೆ ಉತ್ತಮ ನಿಕಟ ಸಂಪರ್ಕವನ್ನಿಟ್ಟುಕೊಂಡು ಈಗಿನ ಬೆಂಗಳೂರನ್ನು ಮಾದರಿಯಾಗಿ ರೂಪಿಸಿ ಅಡಳಿತ ನಡೆಸಿದ್ದರು. ಧಾರ್ಮಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಿಗೆ ಕಾಯಕಲ್ಪ ನೀಡಿದ ನಾಡಪ್ರಭು ಕೆಂಪೇಗೌಡ ಒಬ್ಬ ತಜ್ಞ ರಾಜನೀತಿ ಪರಿಣತರಾಗಿದ್ದರು’ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಆಡಳಿತ ನಡೆಸಿದ ನಾಡಪ್ರಭು ಕೆಂಪೇಗೌಡರ ನೆನಪು ಶಾಶ್ವತವಾಗಬೇಕು. ಗತಕಾಲದ ಪರಿಸರ ಮತ್ತು ಜಲಮೂಲ ಮರುಕಳಿಸಲು ತಾಲ್ಲೂಕಿನಲ್ಲಿರುವ ಕೆರೆಗಳಿಗೆ ಕಾಯಕಲ್ಪ ನೀಡಲು 30 ಕೋಟಿ ಬೈಯಾಪದಿಂದ ಕೆರೆ ಅಭಿವೃದ್ಧಿಗೆ ಮತ್ತು ಅರಣ್ಯೀರಣಕ್ಕೆ ಕ್ರಿಯಾಯೋಜನೆ ಆಗಿದೆ. ಅನುಮೋದನೆಯಾಗಿ ಟೆಂಡರ್ ಕರೆಯಬೇಕಾಗಿದೆ’ ಎಂದು ಹೇಳಿದರು.

‘ನವನಗರ ನಿರ್ಮಾಣ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ಆಡಳಿತದ ರೂಪುರೇಷೆಯನ್ನು ಅಳವಡಿಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ನನಗೆ ಉಪ ವರ್ತುಲ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಮತ್ತು ಜಲಮೂಲ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಮುರುಡಯ್ಯ, ಒಕ್ಕಲಿಗರ ಸಂಘ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಶಿವರಾಮಯ್ಯ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ, ಸದಸ್ಯರಾದ ಮಹೇಶ್, ಭೀಮರಾಜು, ಶೈಲಾ ಜಗದೀಶ್, ಚೈತ್ರ, ಶಶಿಕಲಾ, ಜೆಡಿಎಸ್ ತಾಲ್ಲೂಕು ಘಟಕ ಕಾರ್ಯಾಧ್ಯಕ್ಷ ಆರ್.ಮುನೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.