ADVERTISEMENT

ದೇಶ ಬದಲಾವಣೆ: ಪಕ್ಷದತ್ತ ಯುವಜನ

2ನೇ ವರ್ಷದ ವಾಜಪೇಯಿ ಪುಣ್ಯಸ್ಮರಣೆಯಲ್ಲಿ ಎ.ವಿ.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 5:33 IST
Last Updated 17 ಆಗಸ್ಟ್ 2020, 5:33 IST
ವಿಜಯಪುರದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖಂಡರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ವಿಜಯಪುರದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖಂಡರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ವಿಜಯಪುರ: ‘ದೇಶವನ್ನು ವಿಶ್ವದಲ್ಲೆ ಅತ್ಯುನ್ನತವಾದ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಬಿಜೆಪಿ ಪಕ್ಷದ ಬಗ್ಗೆ ಉತ್ತಮ ಒಲವು ಹೊಂದಿಕೊಂಡು ಸೇರ್ಪಡೆಯಾಗುತ್ತಿರುವ ಕಾರ್ಯಕರ್ತರಿಗೆ ಉತ್ತಮ ಭವಿಷ್ಯವಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ವಾಜಪೇಯಿ ಅವರ ಅವಧಿಯಲ್ಲಿ ಪಕ್ಷಕ್ಕೆ ಹಾಕಿಕೊಟ್ಟಿದ್ದ ಭದ್ರಬುನಾದಿಯಿಂದಾಗಿ ಇಂದು ಪಕ್ಷ ದೇಶದಲ್ಲಿ ಆಡಳಿತ ನಡೆಸುವಂತಾಗಿದೆ. ಇದರಲ್ಲಿ ಅವರ ಶ್ರಮ ಬಹಳಷ್ಟಿದೆ. 70 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್, ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಿಕ್ಕೆ ಸಾಧ್ಯವಾಗಿರಲಿಲ್ಲ. ಬ್ರಿಟಿಷರ ಕಾಲದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡಿ, ಈಗ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವಂತಹ ಮಹತ್ತರವಾದ ತೀರ್ಮಾನವನ್ನು ಕೈಗೊಂಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯದ ಕಾರ್ಡ್ ನೀಡುವ ಮೂಲಕ ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಯ ಆರೋಗ್ಯದ ಕಡೆಗೆ ಗಮನಹರಿಸಲು ಮುಂದಾಗಿರುವುದು ನಮ್ಮ ಸರ್ಕಾರದ ಹೆಮ್ಮೆಯಾಗಿದ್ದು, ಇಂತಹ ಐತಿಹಾಸಿಕ ಕಾರ್ಯಕ್ರಮ ಜಾರಿಗೆ ತರುತ್ತಿರುವುದರಿಂದ ಬಹುತೇಕ ಯುವಕರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ’ ಎಂದರು.

ADVERTISEMENT

ಬಿಜೆಪಿ ಮುಖಂಡ ಜಿ.ಚಂದ್ರಣ್ಣ ಮಾತನಾಡಿ, ‘ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿ ಪಕ್ಷದ ಶಕ್ತಿಯಾಗಿದ್ದರು. ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಭಾಷಣ ಮಾಡುವಾಗ ವಿರೋಧ ಪಕ್ಷಗಳವರೂ ಕೂಡಾ ತಲೆದೂಗುತ್ತಿದ್ದರು. ಅವರ ಕಾಲದಲ್ಲಿ ಈ ದೇಶವನ್ನು ಮುನ್ನಡೆಸಿದ ರೀತಿಯನ್ನು ಗಮನಿಸುವಾಗ ರೋಮಾಂಚನವಾಗುತ್ತದೆ. ಕಾಲೇಜಿನ ವಿದ್ಯಾರ್ಥಿಗಳು ಅವರ ಭಾಷಣ ಕೇಳಲು ಹಾತೊರೆಯುತ್ತಿದ್ದರು. ಈ ಪಕ್ಷವನ್ನು ಉತ್ತುಂಗಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರು ಈ ದೇಶವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತಿರುವುದು ಪಕ್ಷದ ಹೆಮ್ಮೆಯಾಗಿದೆ’ ಎಂದರು.

ಮುಖಂಡ ಬೂದಿಗೆರೆ ನಾರಾಯಣಸ್ವಾಮಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದು ಬೇಡ ಎನ್ನುವುದು ಪಕ್ಷದ ಸಲಹೆಯಾಗಿತ್ತು. ಆದರೆ, ಕಾಂಗ್ರೆಸ್ ನಾಯಕರು ಪಟ್ಟು ಬಿಡದ ಕಾರಣದಿಂದಾಗಿ ಸರ್ಕಾರದಿಂದ ಹೊರಗೆ ಜನಸಂಘವನ್ನು ಸ್ಥಾಪನೆ ಮಾಡಿಕೊಂಡು ದೇಶದಲ್ಲಿ ಪಕ್ಷವನ್ನು ಸಂಘಟಿಸಿದರು. ಅವರ ಫಲ ಇಂದು ದೇಶ ಕಾಣುತ್ತಿದೆ. ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಪ್ರಯತ್ನಿಸಬೇಕು ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಸುಂದರೇಶ್, ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ಪ್ರಧಾನ ಕಾರ್ಯದರ್ಶಿ ಎಸ್.ರವಿಕುಮಾರ್, ಜಿಲ್ಲಾ ಕಾರ್ಯ ದರ್ಶಿ ಕನಕರಾಜು, ದೇ.ಸೂ.ನಾಗರಾಜ್, ನಗರ ಘಟಕದ ಅಧ್ಯಕ್ಷ ಚ.ವಿಜಯಬಾಬು, ಡಿ.ಎಂ.ಮುನೀಂದ್ರ, ಯುವ ಮೋರ್ಚಾ ಅಧ್ಯಕ್ಷ ಮಂಡಿಬೆಲೆ ಮೋಹನ್, ಬಲಮುರಿ ಶ್ರೀನಿವಾಸ್, ನಟರಾಜ್, ರಾಮುಭಗವಾನ್, ವೆಂಕಟೇಶ್ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.