ADVERTISEMENT

ಆನೇಕಲ್: ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:41 IST
Last Updated 23 ಏಪ್ರಿಲ್ 2021, 4:41 IST
ಆನೇಕಲ್ ಪುರಸಭೆ ವ್ಯಾಪ್ತಿಯ ಅಂಗಡಿಗಳಿಗೆ ಪುರಸಭಾ ಅಧ್ಯಕ್ಷ ಎನ್.ಎಸ್.ಪದ್ಮನಾಭ ಭೇಟಿ ನೀಡಿ ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿದರು
ಆನೇಕಲ್ ಪುರಸಭೆ ವ್ಯಾಪ್ತಿಯ ಅಂಗಡಿಗಳಿಗೆ ಪುರಸಭಾ ಅಧ್ಯಕ್ಷ ಎನ್.ಎಸ್.ಪದ್ಮನಾಭ ಭೇಟಿ ನೀಡಿ ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿದರು   

ಆನೇಕಲ್: ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕೊರೊನಾ ಸೋಂಕು ತಡೆಯಲು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಈ ಮೂಲಕ ಪುರಸಭಾ ವ್ಯಾಪ್ತಿಯಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು ಸಹಕರಿಸಬೇಕು ಎಂದು ಪುರಸಭಾ ಅಧ್ಯಕ್ಷ ಎನ್‌.ಎಸ್.ಪದ್ಮನಾಭ ತಿಳಿಸಿದರು.

ಅವರು ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು.

ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಹರಡುವಿಕೆಯ ಜಾಡನ್ನು ತುಂಡು ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಹಾಗಾಗಿ ಸಾರ್ವಜನಿಕರು ಅನಾವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು. ರೋಗ ಬರುವುದಕ್ಕಿಂತ ಮುಂಚಿತವಾಗಿಯೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು. ಸಾಮಾಜಿಕ ಅಂತರ, ಸ್ಯಾನಿಟೈಜರ್‌ ಮತ್ತು ಮಾಸ್ಕ್ ಬಳಕೆ ಮಾಡುವ ಮೂಲಕ ಸಹಕರಿಸಬೇಕು ಎಂದರು.

ADVERTISEMENT

ಅಂಗಡಿಗಳು ಮತ್ತು ಹೋಟೆಲ್‌ಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪುರಸಭಾ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ದಾಖಲೆಗಳನ್ನು ತೋರಿಸಬೇಕು. ಆನೇಕಲ್‌ನ ವಿವಿಧೆಡೆ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸಾರ್ವಜನಿಕರು ಕೊರೊನಾ ತಡೆಗೆ ಸಹಕರಿಸಬೇಕು ಎಂದರು.

ಪುರಸಭಾ ಮುಖ್ಯಾಧಿಕಾರಿ ನಿಸಾರ್‌ ಅಹಮದ್‌ ಮಾತನಾಡಿ, ಪುರಸಭಾ ವತಿಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಜನರು ಗುಂಪುಗಳು ಸೇರುವುದನ್ನು ತಡೆಯಲಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಪರವಾನಗಿ ರದ್ದು ಪಡಿಸಲಾಗುವುದು ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.

ಪುರಸಭಾ ಸದಸ್ಯರಾದ ಮುನಾವರ್‌, ಕೃಷ್ಣ, ರವಿ, ಪುರಸಭಾ ಆರೋಗ್ಯಾಧಿಕಾರಿ ರಾಜಶೇಖರ್‌, ಮುಖಂಡ ಲಕ್ಷ್ಮೀನಾರಾಯಣ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.