ADVERTISEMENT

ದೇವನಹಳ್ಳಿ: ಪ್ರಯಾಣಿಕರ ಸಂಖ್ಯೆ ಕುಸಿಯುವ ಆತಂಕದಲ್ಲಿ ಖಾಸಗಿ ಬಸ್‌ ಮಾಲೀಕರು

ಸರ್ಕಾರಿ ಸಾರಿಗೆಯಲ್ಲಿ ಮಹಿಳೆಯಗೆ ಉಚಿತ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 15:38 IST
Last Updated 4 ಜೂನ್ 2023, 15:38 IST
ವಿಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಖಾಸಗಿ ಬಸ್ ಹಾಗೂ ಬಿಎಂಟಿಸಿ ಬಸ್‌
ವಿಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಖಾಸಗಿ ಬಸ್ ಹಾಗೂ ಬಿಎಂಟಿಸಿ ಬಸ್‌    

ವಿಜಯಪುರ(ದೇವನಹಳ್ಳಿ): ರಾಜ್ಯ ಸರ್ಕಾರ ಜೂನ್‌ 11ರಿಂದ ಸರ್ಕಾರಿ ಸಾರಿಗೆ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದು, ಪ್ರಯಾಣಿಕರ ಸಂಖ್ಯೆ ಕುಸಿಯುವ ಆತಂಕ ಖಾಸಗಿ ಬಸ್‌ ಮಾಲೀಕರನ್ನು ಕಾಡುತ್ತಿದೆ.

ಸರ್ಕಾರದ ನಿರ್ಧಾರ ಮಹಿಳೆಯರಲ್ಲಿ ಸಂತಸ ಮೂಡಿಸಿದರೆ, ಖಾಸಗಿ ಬಸ್‌ ಕ್ಷೇತ್ರ ನಂಬಿಕೊಂಡಿರುವವರ ಮೇಲೆ ನಷ್ಟದ ಪರಿಣಾಮ ಬೀರಬಹುದು ಎಂಬ ಕಳವಳ ಆರಂಭವಾಗಿದೆ. ಇದು ಬಸ್‌ ಮಾಲೀಕರಷ್ಟೇ ಅಲ್ಲದೆ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿಯನ್ನು ಚಿಂತೆಗೀಡು ಮಾಡಿದೆ.

ಮಹಿಳೆಯರಿಗೆ ಮಾತ್ರ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಮಹಿಳೆಯರು ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುವ ವೇಳೆ ಪುರುಷರೂ ಕೂಡಾ ಸಮಪ್ರಮಾಣದಲ್ಲಿ ಸಾರಿಗೆ ಬಸ್‌ಗಳನ್ನು ಹತ್ತುವುದರಿಂದ ಖಾಸಗಿ ಬಸ್‌ ಹತ್ತುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಲಿದೆ ಎಂಬ ಲೆಕ್ಕಚಾರ ಖಾಸಗಿ ಬಸ್‌ ಕ್ಷೇತ್ರದಲ್ಲಿ ಆರಂಭವಾಗಿದೆ.

ADVERTISEMENT

ಕೃಷಿ ಕೂಲಿಕಾರ್ಮಿಕರು, ಗಾರ್ಮೆಂಟ್ಸ್‌ಗಳಿಗೆ ತೆರಳುವ ಕಾರ್ಮಿಕರು, ಹಾಗೂ ಬೆಂಗಳೂರು ನಗರದ ಕಡೆಗೆ ಹೋಗುವ ಕಾರ್ಮಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಮಹಿಳೆಯದ್ದು ಸಿಂಹಪಾಲು ಇತ್ತು. ಇವರೆಲ್ಲರೂ ಸರ್ಕಾರಿ ಬಸ್‌ಗಳ ಕಡೆ ಮುಖ ಮಾಡಲಿದ್ದಾರೆ. ಇದರಿಂದ ಅರ್ಧಕ್ಕಿಂತಲೂ ಹೆಚ್ಚು ಪ್ರಯಾಣಿಕರ ಸಂಖ್ಯೆ ಕಡಿತವಾಗಲಿದೆ. ಇದರಿಂದ ಆದಾಯ ಕುಸಿಯಲಿದ್ದು, ತಮ್ಮ ಜೀವನವು ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಭಯ ಚಾಲಕರು, ನಿರ್ವಾಹಕರು ಮತ್ತು ಉಳಿದ ಸಿಬ್ಬಂದಿಯನ್ನು ಕಾಡುತ್ತಿದೆ.

ಒಂದು ಬಸ್ಸಿಗೆ ₹80 ಸಾವಿರ ರಸ್ತೆ ತೆರಿಗೆ ಕಟ್ಟಿದ್ದೇವೆ. ಬಸ್ಸಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ತಿಂಗಳಿಗೆ ₹50 ಸಾವಿರ ಸಂಬಳ ಕೊಡಬೇಕು. ಕೊರೊನಾದಿಂದಾಗಿ ಲಕ್ಷಾಂತರ ರೂಪಾಯಿಗಳು ನಷ್ಟ ಮಾಡಿಕೊಂಡಿದ್ದೇವೆ. ಈಗ ದಿನಕ್ಕೆ ₹10 ಸಾವಿರ ಕಲೆಕ್ಷನ್ ಆಗುವುದು ಕಷ್ಟವಾಗಿದೆ. ಸರ್ಕಾರದ ಈ ಕಾರ್ಯಕ್ರಮದಿಂದ ಮುಂದೆ ಬಸ್ ನಿಲ್ಲಿಸಬೇಕಾದ ಅನಿವಾರ್ಯ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು ಬಸ್ ಮಾಲೀಕರೊಬ್ಬರು.

‘ನಾನು ಸುಮಾರು 15 ವರ್ಷಗಳಿಂದ ಖಾಸಗಿ ಬಸ್‌ ಚಾಲಕನಾಗಿ ನನ್ನ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ. ಕಳೆದ 3 ವರ್ಷಗಳಲ್ಲಿ ಕೊರೊನಾ ಕಾರಣದಿಂದ ಒಂದಷ್ಟು ಸಂಕಷ್ಟ ಅನುಭವಿಸಿದೆವು. ಬಸ್ ಮಾಲೀಕರು ಕೂಡಾ ತೆರಿಗೆ ಕಟ್ಟಲು ಸಾಧ್ಯವಾಗದ ಕಾರಣ, ಒಂದಷ್ಟು ತಿಂಗಳು ಕಾಲ ಬಸ್‌ಗಳನ್ನು ರಸ್ತೆಗೆ ಇಳಿಸಲಿಲ್ಲ. ಈಗ ಕೆಲವು ಬಸ್ ಮಾತ್ರ ರಸ್ತೆ ತೆರಿಗೆ ಕಟ್ಟಿ ಬಿಟ್ಟಿದ್ದಾರೆ. ಈಗ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭವಾಗಲಿದ್ದು, ನಮ್ಮ ಬಸ್ ಹತ್ತುವುದಿಲ್ಲ. ಉತ್ತಮ ಕಲೆಕ್ಷನ್ ಆದರೆ, ನಮಗೂ ಸಂಬಳ ಕೊಡುತ್ತಾರೆ. ಇಲ್ಲವಾದರೆ ಅವರೂ ನಿಲ್ಲಿಸುತ್ತಾರೆ. ಒಂದೊಂದು ಬಸ್‌ನಲ್ಲಿ ನಾಲ್ಕೈದು ಮಂದಿ ಕೆಲಸ ಮಾಡುತ್ತಿದ್ದೇವೆ. ನಾವೆಲ್ಲರೂ ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ’ ಎಂದು ಆತಂಕದಿಂದ ಹೇಳುತ್ತಾರೆ ಚಾಲಕ ಶ್ರೀನಿವಾಸ್.

ಭಯ ಆರಂಭವಾಗಿದೆ, ಮುಂದೇನು ಎಂಬುದು ಗೊತ್ತಿಲ್ಲ...

ಖಾಸಗಿ ಬಸ್‌ಗಳಲ್ಲಿ 10 ವರ್ಷದಿಂದ ನಾವು ಕೆಲಸ ಮಾಡುತ್ತಿದ್ದೇನೆ. ನಾವು ದುಡಿದಿದ್ದರಲ್ಲೆ ಮನೆ ನಿರ್ವಹಣೆ ಮಾಡುತ್ತೇನೆ. ನಾವಂತೂ ಓದಲಿಲ್ಲ. ಒಬ್ಬ ತಮ್ಮ, ಒಬ್ಬ ತಂಗಿಯನ್ನು ಓದಿಸುತ್ತಿದ್ದೇನೆ. ಸರ್ಕಾರದ ಉಚಿತ ಪ್ರಯಾಣ ಕಾರ್ಯಕ್ರಮದಿಂದ ಮುಂದೆ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತವಾದರೆ ಮುಂದೇನು ಎನ್ನುವ ಚಿಂತೆ ಕಾಡುತ್ತಿದೆ. ಮಾಲೀಕರು ಈಗಾಗಲೇ ಹೇಳುತ್ತಿದ್ದಾರೆ. ಬೇರೆ ಕೆಲಸ ನೋಡಿಕೊಳ್ಳಿ ಎಂದು, ಏನು ಕೆಲಸಕ್ಕೆ ಹೋಗಬೇಕು, ಮಾಡಿರುವ ಸಾಲ ಹೇಗೆ ತೀರಿಸಬೇಕು ಎನ್ನುವ ಭಯ ಕಾಡುತ್ತಿದೆ ಎನ್ನುವ ಖಾಸಗಿ ಬಸ್‌ ಕಾರ್ಮಿಕರೊಬ್ಬರು ಸರ್ಕಾರ, ನಮ್ಮಂಥವರಿಗೆ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಏನಾದರೂ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.