
ವಿಜಯಪುರ (ದೇವನಹಳ್ಳಿ): ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟನೆ ಉಂಟಾಗಿರುವುದರಿಂದ ವ್ಯಾಪಕ ಧೂಳಿನಿಂದ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಹೊಸಕೋಟೆ, ಶಿಡ್ಲಘಟ್ಟ, ತಿರುಪತಿ ಸೇರಿದಂತೆ ವಿವಿಧೆಡೆಗೆ ಪಟ್ಟಣದ ಮುಖ್ಯರಸ್ತೆಯ ಮೂಲಕವೇ ಹಾದು ಹೋಗುವುದರಿಂದ ವಾಹನ ದಟ್ಟಣೆ ಹೆಚ್ಚಳಗೊಂಡಿದೆ.
ಬಸ್, ಲಾರಿ ಇನ್ನೀತರ ದೊಡ್ಡ ವಾಹನಗಳು ಸಂಚರಿಸಿದರೆ ಹಿಂದೆಯೇ ಬರುವ ಧೂಳು ಹಿಂಬದಿ ಸವಾರರ ಕಣ್ಣಿಗೆ ಬೀಳುತ್ತಿದ್ದು, ದ್ವಿಚಕ್ರ ವಾಹನ ಸವಾರರು ಧೂಳಿನ ಭೀತಿ ಎದುರಿಸುವಂತಾಗಿದೆ.
ರಸ್ತೆ ಪಕ್ಕದ ಮಳಿಗೆ ವ್ಯಾಪಾರಸ್ಥರು ಧೂಳಿನಿಂದ ಬೇಸತ್ತು ಹೋಗಿದ್ದು, ಆಳಲನ್ನು ಯಾರಿಗೆ ಹೇಳಬೇಕು ಎನ್ನುವುದು ತೋಚದೆ ಅನೇಕ ಸಮಸ್ಯೆಗಳ ನಡುವೆ ಅನಿವಾರ್ಯವಾಗಿ ಕಾಲ ಕಳೆಯುವಂತಾಗಿದೆ. ಧೂಳು ನಿಯಂತ್ರಿಸಲು ಬೆಳಿಗ್ಗೆ ಸಂಜೆ ಸಮಯದಲ್ಲಿ ರಸ್ತೆಗೆ ನೀರು ಹಾಯಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವುದರಿಂದ ಅಪಘಾತಗಳಿಗೆ ಎಡೆ ಮಾಡಿಕೊಟ್ಟಿದೆ. ವಾಹನ ದಟ್ಟಣೆಯಿಂದ ವಾಹನ ಸವಾರರು, ಪಾದಾಚಾರಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗಾಂಧಿಚೌಕ, ಹಳೆ ಪುರಸಭಾ ಮುಂಭಾಗ, ವೆಂಕಟರಮಣಸ್ವಾಮಿ ದೇವಾಲಯ ರಸ್ತೆ, ಬಸ್ ನಿಲ್ದಾಣ, ಬಜಾರ್ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ವಾಹನ ಸವಾರರು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ, ಪಾದಾಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ.
ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಕಡಿವಾಣ ಹಾಕಲು ಪೊಲೀಸರು ಕ್ರಮ ಕೈಗೊಳ್ಳಬೇಕು. ಶಾಲಾ-ಕಾಲೇಜು ಆರಂಭ ಹಾಗೂ ಬಿಡುವಿನ ವೇಳೆ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅನಾರೋಗ್ಯದ ಭೀತಿ
ರಸ್ತೆ ಧೂಳಿನಿಂದ ಹದಗೆಡುತ್ತಿರುವ ವಾಯುಮಾಲಿನ್ಯದಿಂದ ಸಾರ್ವಜನಿಕರಿಗೆ ಅನಾರೋಗ್ಯದ ಭೀತಿ ಶುರುವಾಗಿದೆ. ಧೂಳಿನಿಂದ ಕೆಮ್ಮು ಕಣ್ಣು ಉರಿ ಅಸ್ತಮಾ ಉಸಿರಾಟ ಚರ್ಮರೋಗ ಶ್ವಾಸಕೋಶ ತೊಂದರೆಗೆ ಒಳಗಾಗುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.