ADVERTISEMENT

ವಿಜಯಪುರ: ಧಾರ್ಮಿಕ ಸಂಭ್ರಮಕ್ಕೆ ನೀತಿಸಂಹಿತೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2023, 12:40 IST
Last Updated 4 ಏಪ್ರಿಲ್ 2023, 12:40 IST
ಕರಗ ಮಹೋತ್ಸವ (ಸಂಗ್ರಹ ಚಿತ್ರ)
ಕರಗ ಮಹೋತ್ಸವ (ಸಂಗ್ರಹ ಚಿತ್ರ)   

ವಿಜಯಪುರ(ದೇವನಹಳ್ಳಿ): ಮೇ. 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಬ್ರಹ್ಮರಥೋತ್ಸವ, ಹಾಗೂ ಕರಗ ಮಹೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮಕ್ಕೆ ತೊಡಕುಂಟಾಗುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಪಟ್ಟಣದಲ್ಲಿ ಏ. 6ರಂದು ನಗರೇಶ್ವರಸ್ವಾಮಿ ಕಲ್ಲುಗಾರಿ ಬ್ರಹ್ಮರಥೋತ್ಸವ ಹಾಗೂ ರೇಣುಕಾಎಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಏರ್ಪಡಿಸಲಾಗಿದೆ. ಈ ಸಂಭ್ರಮಕ್ಕೆ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಗೆ ತಂದಿರುವ ಕಾರಣ, ಎಲ್ಲೂ ಕೂಡಾ ಪ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟಿ ಸಾರ್ವಜನಿಕರಿಗೆ ಶುಭಾಶಯ ಕೋರಲು ಸಾಧ್ಯವಾಗುತ್ತಿಲ್ಲ.

ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ಈ ವೇಳೆ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಅನ್ನಸಂತರ್ಪಣೆ, ದೇವರ ಮೆರವಣಿಗೆ, ವಾದ್ಯಗೋಷ್ಟಿಯಂತಹ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದ್ದವು. ಆದರೆ, ಧ್ವನಿವರ್ಧಕಗಳ ಉಪಯೋಗಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿಲ್ಲವಾದರೂ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಉಪಯೋಗ ಮಾಡುವಂತಿಲ್ಲ. ಕರಗ ಮಹೋತ್ಸವಕ್ಕೂ ರಾತ್ರಿ 10 ಗಂಟೆಯವರೆಗೂ ಮಾತ್ರ ಚುನಾವಣಾ ಅಧಿಕಾರಿಗಳ ಅನುಮತಿ ನೀಡಿದ್ದಾರೆ. ಪ್ರತಿ 5 ವರ್ಷಕ್ಕೊಮ್ಮೆ ಚುನಾವಣಾ ಸಮಯದಲ್ಲಿ ಹೀಗೆ ಆಗುತ್ತಿದೆ.

ADVERTISEMENT

ಯಾವುದೇ ಪಕ್ಷದ ರಾಜಕಾರಣಿಗಳನ್ನು ಕರೆಸಿಕೊಳ್ಳುವಂತಿಲ್ಲ. ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ದೇವಾಲಯಗಳಲ್ಲಿ ಚುನಾವಣೆ ಪ್ರಚಾರ ಮಾಡುವಂತಿಲ್ಲ. ಒಂದು ವೇಳೆ ನೀತಿಸಂಹಿತೆ ಉಲ್ಲಂಘನೆ ಮಾಡಿದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರತಿ ವರ್ಷ ರಾತ್ರಿ 10 ಗಂಟೆಗೆ ಆರಂಭವಾಗುತ್ತಿದ್ದ ಕರಗ ಮಹೋತ್ಸವವು, ಬೆಳಗಿನ ಸಮಯ 11 ಗಂಟೆಯವರೆಗೂ ಪಟ್ಟಣದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿತ್ತು. ಬೀದಿ ಬೀದಿಗಳಿಗೆ ತೆರಳಿ ಪೂಜೆ ಸ್ವೀಕರಿಸಿ, ದೇವಾಲಯಕ್ಕೆ ತೆರಳುತ್ತಿತ್ತು. ಆದರೆ, ಈ ಸಂಭ್ರಮಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತಿದೆ ಎಂದು ಸ್ಥಳೀಯ ಮುಖಂಡ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

ತಹಶೀಲ್ದಾರ್ ಶಿವರಾಜ್ ಮಾತನಾಡಿ, ಈ ಚುನಾವಣಾ ಸಮಯದಲ್ಲಿ ನಡೆಯುವಂತಹ ಎಲ್ಲ ಸಭೆ, ಸಮಾರಂಭ ಹಾಗೂ ಮಹೋತ್ಸವಗಳಿಗೆ ಸ್ಥಳೀಯ ಜನಪ್ರತಿನಿಧಿಗಳು, ಚುನಾವಣಾ ಆಕಾಂಕ್ಷಿಗಳು, ಸಮಾಜ ಸೇವಕರು, ಆರ್ಥಿಕ ಸಹಾಯ ನೀಡುವಂತಿಲ್ಲ. ತಮ್ಮ ಭಾವಚಿತ್ರಗಳನ್ನು ಹಾಕಿಕೊಂಡು ಉಡುಗೊರೆ ನೀಡುವಂತಿಲ್ಲ. ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ಕಟ್ಟುವಂತಿಲ್ಲ. ಧ್ವನಿವರ್ಧಕ ಬಳಕೆ ಮಾಡಬೇಕಾದರೆ, ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ರಾತ್ರಿ 10 ಗಂಟೆಯ ನಂತರ ಬೆಳಿಗ್ಗೆ 6 ಗಂಟೆಯವರೆಗೂ ಬಂದ್ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.